Friday 13 June 2014

ಯಕ್ಷಪ್ರಶ್ನೆ
ನನ್ನವನ ಯಕ್ಷಪ್ರಶ್ನೆ,                                        
ಪ್ರತೀ ಪ್ರಣಯದ ನಂತರವೂ
ಅದೇಕೆ ನನ್ನೆದೆಯಲ್ಲಿ ಹುದುಗಿ
ಕಣ್ಣೀರಿಡುತ್ತಿ..??

ಕೆದರಿದ ಜೊಂಪೆಗೂದಲ ಮೇಲೆತ್ತಿ ಕಟ್ಟುವಾಗ
ಬೆತ್ತಲಾದ ಬೆನ್ನಮೇಲೆ ನಿನ್ನ ಬೆರಳಿನ  ಚಿತ್ತಾರ..
ಅದೇನು ಬರೆಯುತ್ತೀಯೊ, ಜೀವ  ಭಾರ ಹೊತ್ತ
ಬಡಕಲು ಸೊಂಟಕ್ಕೀಗ ಮರುಜೀವ..

ದುಗುಡಗಳೆಲ್ಲ ಘನೀಕೃತಗೊಂಡು ಮೈವೆತ್ತ
ಎದೆಯ ಆಕಾರದಲ್ಲೆಲ್ಲ ನಿನ್ನೊಡಲ ಬಿಸಿಯುಸಿರ ಸ್ಪರ್ಶ,
ಅಪ್ಪಟ ತಾಯಿಯ ಅನುಭೂತಿ
ಕರಗುತ್ತಿದಿಯೆನೋ ಕಿಲಿಮಂಜಾರೋ ಪರ್ವತ..

ಮುಂಗುರುಳ ಸರಿಸಿ, ಹಣೆಗೆ ತುಟಿಯೊತ್ತಿದ
ನಿನ್ನ ಕಣ್ಣಲ್ಲಿ ಕಣ್ಣು ನೆಟ್ಟರೆ,ಆತ್ಮವ ಹೊಕ್ಕು
 ಕಳೆದಿರುವ ನನ್ನ ಅಲ್ಲಿ ಪಡೆಯುವ ಸಂಭ್ರಮ.. 
ನೋವೆಲ್ಲ ಹೀರಿದ ಅಧರಗಳ ಮೇಲೆ
ಬೆರಳಿಟ್ಟು ನಾನೇ ಮಾಡಿಕೊಳ್ಳುವ ಧೃಡೀಕರಣ..

ಈ ಬಾಹುಬಂಧನದಲ್ಲಿ ಇಡೀ ಜಗದ ವಿಸ್ತಾರ,
ಧನ್ಯತೆಯ ಸ್ಥಾಯೀಭಾವ, ಉತ್ಕಟ ಪ್ರೇಮದ ಸಾಕ್ಷಾತ್ಕಾರ,
ಕಾಣುತ್ತೇನಲ್ಲಾ ನನ್ನತನದ ಮರು ಆವಿಷ್ಕಾರ
ಅದಕ್ಕೆ ಏನೋ, ಪ್ರತೀ ಕೊನೆಯಲ್ಲೂ ಕಣ್ಣೀರು.. 

Saturday 3 May 2014






ನಿನ್ನೆ ರಾತ್ರಿಯೆಲ್ಲ ನಿನ್ನದೇ ನೆನಪು
ಉರಿಯುವ ದೀಪದ ಜೊತೆ,
ಸುಡುಗಾಡು, ಈ ಆತ್ಮವೂ ಉರಿಯುತ್ತಿತ್ತು
ಜೀವರಸವೂ ಸೋರಿರಬಹುದು ಸ್ವಲ್ಪ
ಕಣ್ಣೀರು ಹರಿದಿತ್ತೇನೋ, ಕೆನ್ನೆಯೆಲ್ಲ ಉಪ್ಪುಪ್ಪು..!

ನಿನ್ನಗಲಿಕೆಯ ನೋವಿನ ತೀವ್ರತೆಗೆ
ನನ್ನ ವೀಣೆಯ ಶ್ರುತಿ ಮಿಡಿಯುವ
ಚಂದ್ರಕೌಂಸದ ಜುಗಲ್ ಬಂದಿ.. 
ನೆನಪ ಕೊಲ್ಲುವ ನೆಪದಲ್ಲಿ, ತಾನ್ ಗಳೆಲ್ಲ ಕರಗತ
ಸಾ ಗ ಮ ಧ ನಿ ಸಾ, ಸಾ ನಿ ಧ ಮ ಗ, ಮ ಗ ಸಾ ನಿ ಸಾ..!!
ಪೂರ್ವದಲ್ಲಿ ಸೂರ್ಯನ ಉದಯ, ಕಿಸಕ್ಕನೆ ನಗುತ್ತಾನೆ..  
ಸುಡುಗಾಡು, ಈ ಆತ್ಮ ಉರಿಯುತ್ತದೆ.. 

Sunday 30 March 2014

           ಯುಗಾದಿ 



ಬಂತು ಮತ್ತೊಂದು ಯುಗದ ಆದಿ 
ಬೇವೇನು, ಬೆಲ್ಲವೇನು 
ನಾನಂತೂ ಹಾಡಲು ಸಿದ್ಧವಾಗಿದ್ದೇನೆ 
ಹರುಷ ಗೀತೆಗೆ ನಾಂದಿ.. 

ನನ್ನವರು ನನ್ನವರಲ್ಲದವರು ಎಲ್ಲರಿಗೂ, 
ದೇವರೇ ಎರೆದುಬಿಡು ಬೆಲ್ಲದ ಸವಿರುಚಿ, 
ಹಿತಮಿತವಾಗಿರಲಿ ಕಹಿ.. 

ಬೆಲ್ಲದ ಸವಿ ಉಣ್ಣುತ್ತಲೇ ಬಂದವರಿಗೆ 
ಈ ವರುಷವೂ ಇರಲಿ ಬರಿಯ ಸಿಹಿ 
ಬಂದರೆ ಬರಲಿ ಸಕ್ಕರೆ ಖಾಯಿಲೆಯ ನೋವು...   
ಹಾ! ಮತ್ತೆ ಚುನಾವಣೆ ಬಂತಲ್ಲವೇ 
ಭ್ರಷ್ಟರಿಗೆಲ್ಲ ತೋರಿಸಿಯೇ ಬಿಡು
ಸೋಲಿನ ಕಹಿ ಬೇವು ... 

ಭಗವಂತ ಇಗೋ ಕೇಳು ನನ್ನ ಅಹವಾಲು 
ನಿನ್ನ ಪಾಕಶಾಲೆಯಿಂದ ನನಗಾಗಿ ತಯಾರಾಗುತ್ತಿರುವ 
ರಸಾಯನಕ್ಕೆ ಬೆಲ್ಲದ ಕೈ ಸ್ವಲ್ಪ ಮುಂದೇ ಇರಲಿ 
ಕಹಿ ಉಂಡು ಸಾಕಾಗಿದೆ.. 
ಜೊತೆಗಿರಲಿ ಒಂದಿಷ್ಟು ಹುಣಸೆ ಹುಳಿಯ ಮಜ  
ಮತ್ತೆ ಒಂಚೂರು ಮಾವಿನ ಚಿಗುರಿನ ಒಗರು..!

ಯುಗ ಯುಗಾದಿ ಕಳೆದರು ಮತ್ತೆ ಬರುವ ಯುಗಾದಿಯಂತೆ 
ಸುಲಲಿತವಾಗಲಿ ಎಲ್ಲರ ಬಾಳು, ಆ ಕೋಗಿಲೆ ದನಿಯ ಇಂಪಿನಂತೆ.. :) :)










Friday 21 March 2014

ಹೋಳಿ

ಗುಲಾಲು ಹಚ್ಚಲು ಬಂದ  ನಲ್ಲ...
ನಾನೆಂದೆ, ಬರೀ ಕಪ್ಪು, ಮತ್ತೊಂದಿಷ್ಟು ಬಿಳಿ
ಬದುಕೆಲ್ಲ..

ಈಗ ನಾ ಬಂದೆನಲ್ಲ
ಪ್ರೀತಿಯ ಕೆಂಪು, ವಿರಹದ ನೀಲಿ,
ಸ್ನೇಹದ ಹಳದಿ, ಮುನಿಸಿನ ಗುಲಾಬಿ..
ತುಂಬಿಕೊ ಉಡಿಯೆಲ್ಲ, ಇನ್ನು ಮೇಲೆ ಬಣ್ಣವೇ  ಇಲ್ಲೆಲ್ಲ... 

ಯುದ್ಧ 

ಮೂರನೇ ಮಹಾಯುದ್ಧ
ಅವನ ಅವಳ ಮಧ್ಯ.. !!
ಕಾರಣ :
ಅವ ತೆಗೆಸಿದ್ದಾನೆ
ಇವಳಿಗೆಂದೇ ಬೆಳೆಸಿದ್ದ
ಕೋರೆ ಮೀಸೆ, ಕುರುಚಲು ಗಡ್ಡ.. (ಕ್ಲೀನ್ ಶೇವ್) !
ಸೇಡು :
ಕಿತ್ತು ಬಿಸಾಕಿದ್ದಾಳೆ
ಅವನ ನೆಚ್ಚಿನ ಮೂಗುತಿ..!!

ಅಷ್ಟೇ.. 

ನಿನ್ನ ವೀರ್ಯವ ಬಸಿರಲ್ಲಿ ಹೊತ್ತು
ಹನ್ನೆರಡು ಮಕ್ಕಳ ಹಡೆಯುವ ಬಯಕೆಯಿಲ್ಲ,
ನನ್ನ  ಹೆಸರ ಮುಂದೆ ನಿನ್ನ ಅಡ್ಡಹೆಸರ
ತಳುಕು ಹಾಕಿಕೊಳ್ಳುವ ಖಯಾಲಿಯೂ ಇಲ್ಲ,
 ಜೊತೆಗೇ ಬರುವ ನಿನ್ನ ಹೆಸರ ಹೊತ್ತ
ಕರಿಮಣಿ ಸರದ ಸಹವಾಸವಂತೂ ಬೇಡವೇ ಬೇಡ..
ನನಗೆ ಬೇಕಿರುವುದು
ನಾಲ್ಕು ಮಾತು, ಒಂದು ಜಗಳ, ಮತ್ತೆರೆಡು ನಗೆ..
ಅಷ್ಟೇ...  

4.
ನಿನ್ನೆ ರಾತ್ರಿಯೆಲ್ಲ ನಿನ್ನದೇ ನೆನಪು
ಉರಿಯುವ ದೀಪದ ಜೊತೆ,
ಸುಡುಗಾಡು, ಈ ಆತ್ಮವೂ ಉರಿಯುತ್ತಿತ್ತು
ಜೀವರಸವೂ ಸೋರಿರಬಹುದು ಸ್ವಲ್ಪ
ಕಣ್ಣೀರು ಹರಿದಿತ್ತೇನೋ, ಕೆನ್ನೆಯೆಲ್ಲ ಉಪ್ಪುಪ್ಪು..!

ನಿನ್ನಗಲಿಕೆಯ ನೋವಿನ ತೀವ್ರತೆಗೆ
ನನ್ನ ವೀಣೆಯ ಶ್ರುತಿ ಮಿಡಿಯುವ
ಚಂದ್ರಕೌಂಸದ ಜುಗಲ್ ಬಂದಿ.. 
ನೆನಪ ಕೊಲ್ಲುವ ನೆಪದಲ್ಲಿ, ತಾನ್ ಗಳೆಲ್ಲ ಕರಗತ
ಸಾ ಗ ಮ ಧ ನಿ ಸಾ, ಸಾ ನಿ ಧ ಮ ಗ, ಮ ಗ ಸಾ ನಿ ಸಾ..!!
ಪೂರ್ವದಲ್ಲಿ ಸೂರ್ಯನ ಉದಯ, ಕಿಸಕ್ಕನೆ ನಗುತ್ತಾನೆ..  
ಸುಡುಗಾಡು, ಈ ಆತ್ಮ ಉರಿಯುತ್ತದೆ.. 

Wednesday 19 March 2014

ಈ ಶತಮಾನದ ಮಾದರಿ ಹೆಣ್ಣು   

   

ಎದೆಯೊಳಗಿನ ಕತ್ತಲನ್ನೆಲ್ಲ, ಕುಂಚಕ್ಕೆ ಸವರಿ 
ಕಣ್ಣ ಕಾಡಿಗೆ ಮಾಡಿಕೊಂಡೆ, ನೋಟವೆಲ್ಲ ಈಗ ತೀಕ್ಷ್ಣ ..!
ಗುಂಡಿಗೆಯ ಹೆಪ್ಪುಗಟ್ಟಿದ ರಕ್ತವ 
ಬಾಚಿ ಮೆತ್ತಿಕೊಂಡೆ, ತುಟಿಗೆ ಹೊಳೆವ  ಕೆಂಪು ರಂಗು..!

ಅಂತರಂಗದ ವೈರುಧ್ಯಗಳನ್ನೆಲ್ಲ ನುಣ್ಣಗೆ ಪುಡಿಮಾಡಿ 
ಬಳಿದುಕೊಂಡೆ, ಬಿಳಿಚಿದ್ದ ಕೆನ್ನೆಯೆಲ್ಲ ಫಳ ಫಳ..! 
ತಲೆಯೇರಿ ಸವಾರಿ ಮಾಡುವ ಕುಹಕಗಳ, ಹಿಡಿದು ಕಟ್ಟಿ
 ಮಟ್ಟಸವಾಗಿ ಹೆಣೆದೆ, ಆಹಾ ನವೀನ ಕೇಶವಿನ್ಯಾಸ..! 

ಯಾವಾಗೆಂದರೆ ಆವಾಗ ಬಂದಪ್ಪಳಿಸುವ, ಅಕರಾಳ ವಿಕರಾಳ
 ಚೀತ್ಕಾರಗಳಿಗೆ ತೋರುತ್ತೇನೆ ಜಾಣಕಿವುಡು, 
ಸೋಲೊಪ್ಪಿಕೊಂಡ ಅವನ್ನು ಕಿವಿಗೆ ಇಳಿಬಿಟ್ಟೆ, ಆಕರ್ಷಕ ಕಿವಿಯೋಲೆ..! 

ಹೆಜ್ಜೆ ಹೆಜ್ಜೆಗೂ ಕಾಲಿಗೆ ತೊಡರುವ ಕತ್ತಿಯಂಚಿನ ಮೇಲೆ ನಡೆದ ದಾರಿ  
ಇನಿತೂ ತೊಂದರೆಯಿಲ್ಲ, ಒಪ್ಪವಾಗಿ ಸುತ್ತಿ ಮಾಡಿಕೊಂಡೆ ಕಾಲ್ಗೆಜ್ಜೆ,
ಮುಂಬರುವ ಕವಲುದಾರಿ, ತಿರುವುಗಳಿಗೆಲ್ಲ ಘಲ್ ಘಲ್ ಸದ್ದೇ ಎಚ್ಚರದ ಕರೆಗಂಟೆ..! 

ಶ್ವಾಸದಿಂದ ಉಕ್ಕಿಬರಲು ಹವಣಿಸುವ ದುಃಖದ ಮಡುವ ಹತ್ತಿಕ್ಕಿ, 
ಅಲ್ಲೇ ಘನೀಕರಿಸುತ್ತೇನೆ, ಎಂಥವರಲ್ಲೂ
 ಆಸೆ ಹುಟ್ಟಿಸುವ ಬಿಗಿಯಾದ ಎದೆಕಟ್ಟು..!

ಭೂತದ ಛಾಯೆ ಕವಿದಿರುವ ದೇಹಕ್ಕೆ, 
ಭವಿಷ್ಯದ ಕನಸಿನ ಗರಿಗರಿ ಪೋಷಾಕು, ವರ್ತಮಾನ ಚಲಿಸಬೇಕಲ್ಲ..??

ಹಾ ಇಗೋ ಬಂದೆ, ನಾನೀಗ ಸಿದ್ಧ, ನಿಮ್ಮ ಕ್ಯಾಮೆರಾದ ಕಣ್ಣಿಗೆ
 ಕ್ಲಿಕ್ಕಿಸಿ, ತೋರುತ್ತೇನೆ, ನಕಲಿ ನಗೆ.. 
ಹೃದಯ ಹಗುರಾಗಿ ತೇಲಿಬಂದ ಹೂ ನಗೆಯಲ್ಲ
 ತೀರ ಕಿಬ್ಬೊಟ್ಟೆಯಲ್ಲಿ ಅಳದೇ ಮುಚ್ಚಿಟ್ಟ ನಗೆ..!

ಅರೇ, ನೋಡಿ ಅಲ್ಲಿ ಅವಳ ಛಾಯಾಚಿತ್ರ,
ವಾಹ್, ಎಷ್ಟು ಆಕರ್ಷಕ, ಏನು ಮೋಡಿ.. 
ಪುಣ್ಯವಂತೆ ಇವಳು, ಎಷ್ಟು ತೀವ್ರವಾಗಿ ಬದುಕುತ್ತಾಳೆ..!! 
ಸುಂದರ ಇವಳ ಜೀವನ, ಇವಳಂತೆಯೇ.. 
ಪಾಪಿ, ನಮಗೆಲ್ಲ ಹೊಟ್ಟೆ ಉರಿಸುತ್ತಾಳೆ.. 

ಅಬ್ಬಾ, ಎಷ್ಟು ಕರಗತ ನನಗೀ ನಗುವ ಕಲೆ,  ನಟಸಾರ್ವಭೌಮೆ..!
ಹೌದು, ಕಟ್ಟಿ ಎಲ್ಲೋ  ಎಸೆದು, ಮರೆತ ಬಯಕೆಗಳ ಗಂಟಿನಾಣೆ,  
ಇದು ನಾನು
 ಈ ಶತಮಾನದ ಮಾದರಿ ಹೆಣ್ಣು..!!

Monday 3 March 2014

            ಕಣ್ಣಿನಾಟ 


ನಾನೀಗ ಏನೋ ಹೇಳಬೇಕಿದೆ ತುಂಬ ದೀರ್ಘವಾದ ವಿಚಾರ  
ಇತ್ತ ನೋಡು ನನ್ನನ್ನೇ, 
ಗಮನವಿಟ್ಟು ಕೇಳು...  

ಇಷ್ಟೆಲ್ಲಾ ಇದೆ ಜಂಜಡ, ಬೇಗ ನಿರುಮ್ಮಳಾಗುವ ಅವಸರ..   
 ಅರ್ಥವಾಯಿತೇ..? 
ಪರಿಹಾರವೇನು,  ಹೇಳೇ ಬಿಡು.. 

ಅರೇ..??   ಅದೇನು ಹೇಳಿದೆ ನೀ..?? 
ಕಣ್ಣ ಕಾಡಿಗೆ ಮಂಕುಬೂದಿ ಎರಚಿತು ನೋಡು  
ತಲೆಯೆಲ್ಲ ಸುತ್ತು, ಬುದ್ಧಿ ವಶೀಕರಣ 
ಆಡುವ ಪ್ರತೀ ಅಕ್ಷರಕ್ಕೂ, ಕಣ್ಸನ್ನೆಯ ವ್ಯಾಕರಣ... 
 ಒಮ್ಮೆ ಕಿರಿದು, ಆಶ್ಚರ್ಯಕ್ಕೆ ಊರಗಲ ಮರುಕ್ಷಣ..!!   
ಕಳವಳ, ತಳಮಳಗಳೆಲ್ಲವೂ, ರೆಪ್ಪೆಗಳ ಪಟಪಟದೊಂದಿಗೆ ಅನಾವರಣ..
 ಅದ್ಭುತ ಯಕ್ಷಗಾನ...!!  
ಕಳೆದೇ ಹೋಗಿದ್ದೆ ನಿನ್ನ ಕಣ್ಣಿನಾಟದಲ್ಲಿ, ಕಿವಿಗೇನೂ ಬೀಳಲಿಲ್ಲ..   
ಮತ್ತೊಮ್ಮೆ ಹೇಳು ಆ ನಿನ್ನ ದೀರ್ಘ ವಿಚಾರ  
ಈಗ ಕೇಳಿಸಿಕೊಳ್ಳುವೆ ಸರಿಯಾಗಿ
 ಬೇರೆತ್ತಲೋ ನೋಡುತ್ತ...!! 

Friday 28 February 2014



ನಾ ಬಾಗೇಶ್ರಿ ಹಾಡುವಾಗೆಲ್ಲ
ನಿನ್ನದೇ ನೆನಪು..
ರಾತ್ರಿಯ ಆಲಾಪದಲ್ಲೆಲ್ಲ
ನಿನ್ನದೇ ಗುಂಗು..
ನಿಶಾದಕ್ಕೆ ಶ್ರುತಿ ಸೇರುತ್ತಿದ್ದಂತೆ
ಕೊರಳ ಸೆರೆಯೆಲ್ಲ ದೈನ್ಯ.. 
ನಾಳೆ ಮುಂಜಾವು ನೀ ದಾರಿಯಲ್ಲೆಲ್ಲೋ
ಸಿಕ್ಕುಬಿಡು..
ಷಡ್ಜ ದ ವಾದಿಗೆ, 'ಮ'ಧ್ಯಮದ ಸಂವಾದಿಯಂತೆ
ಆಗಿಬಿಡಲಿ ಪುನರ್ಮಿಲನ..
 

Sunday 9 February 2014



ಓದು                                                      

ನಿನ್ನನ್ನೊಮ್ಮೆ ಓದಬೇಕಿದೆ,
ತೀವ್ರವಾಗಿ, ಮುನ್ನುಡಿಯಿಂದ ಕೊನೆಪುಟದವರೆಗೆ... 
ನಾನಂತೂ ಎಂದಿಗೂ ತೆರೆದ ಪುಸ್ತಕ...  
ಪ್ರತೀ ಅಧ್ಯಾಯವೂ ಸ್ವಚ್ಚಂದ, ಸರಳ 
ತೀರ ನಿನ್ನೆದೆಗೆ ನಾಟಿಬಿಡಬಹುದು...  
ಎಲ್ಲ ಸಾಲಲ್ಲೂ ಅಪ್ಪಟ 'ನಾನು' 
ನಿನ್ನ ನೆಚ್ಚಿನ ಪುಸ್ತಕದ ಪಟ್ಟಿಗೆ ಸೇರಿಯೂಬಿಡಬಹುದು... 
ಒಮ್ಮೆ ಅನುವು ಮಾಡಿಕೊಂಡು ಓದಿಯೇ ಬಿಡು 
ಹಾಗೇ ನಿನ್ನನೊಮ್ಮೆ ಓದುವ ಅವಕಾಶವನ್ನೂ ನೀಡಿಬಿಡು.. 






ಜರೂರಿ 


ಪ್ರೀತಿಯಂಗಡಿಯಲ್ಲಿ 
ಹೃದಯ ಗಿರವಿ ಇಟ್ಟಾಗಿದೆ.. 
ನನಗೀಗ ಅದ ಹಿಂಪಡೆಯುವ ಜರೂರಿ
ಅರ್ಧ ಸೇರು ಕಣ್ಣೀರು, ಒಂದು ಮಣ  ನಿಟ್ಟುಸಿರು, ರಾಶಿ ನೆನಪುಗಳು
ಸದ್ಯಕ್ಕಿರುವುದು ಇಷ್ಟೇ, ಒಪ್ಪಿಸಿಕೋ 
ಬಾ ವ್ಯವಹಾರ ಚುಕ್ತಾ ಮಾಡಿಬಿಡೋಣ, ಏಕೆಂದರೆ 
ನನಗೀಗ ಹೃದಯ ಹಿಂಪಡೆಯುವ ಜರೂರಿ...








Monday 3 February 2014

                             ಗುಲ್ ಮೊಹರ್ ಳ ಸ್ವಗತ 

ಹೇ ಗುಲ್ ಮೊಹರ್ 
ನಿನ್ನಗುಲ್ ಮೊಹರ್  ಗಿಡದಿಂದ
ಕೆಲ ಹೂಗಳನ್ನ ಕಿತ್ತು ತಾ
ಕೆಂಪು  ಮತ್ತು ಬಿಳಿ ಮಿಶ್ರಿತ ಬಣ್ಣ                                                         

ನನ್ನ ಶವಪೆಟ್ಟಿಗೆಯನ್ನು ಸಿಂಗರಿಸು 

ಸಂಜೆ ಸರಿಯುವ ಸೂರ್ಯನಂತೆ ಆತ್ಮ  ...

 

ಇಕೋ ಇಲ್ಲಿವೆ ನನ್ನ ಗುಲ್ ಮೊಹರ್                                                  
 ಗಿಡದ ಕೆಂಪು ಬಿಳಿ  ಹೂಗಳು,             
ಅವುಗಳೊಡನೆ,  ನಿನ್ನೊಡನೆನಾನೂ ಬರುವೆ 
ಸ್ವರ್ಗವೋನರಕವೋಯಾವುದಾದರೂ ಸರಿ
ಅಲ್ಲಿ ಮತ್ತೆ ಉದಯಿಸೋಣ
ಚುಮು ಚುಮು ಮುಂಜಾವಿನ ರವಿಯಂತೆ.....

 

                                                                                                                        


Wednesday 22 January 2014

 ಅಮಲು 

ನಿನ್ನ ಘಮದ ಅಮಲಿನಲ್ಲಿ ತೇಲುತ್ತಿದ್ದೆ
ನೀ ಕಂಪು ಸೂಸುವ ಕಸ್ತೂರಿ ಮೃಗ
ನಾ ಮೋಹಗೊಂಡ ಹರಿಣಿ  ಎಂದುಕೊಂಡೆ
ಆಮೇಲಷ್ಟೇ ಗೊತ್ತಾದದ್ದು ....
ಅದು Park Avenue's Good morning Deo spray ಎಂದು.... !!

ಕಾರಣ 

ನೀನ್ಯಾಕೆ ನನ್ನ ಹುಚ್ಚಿಯಂತೆ ಪ್ರೀತಿಸುತ್ತೀಯ..??

ಕೇಳುವ ದರ್ದು ನಿನಗೂ ಬೇಡ 
ಹೇಳುವ ಹರಕತ್ತು ನನಗೂ ಇಲ್ಲ 
ಕೇಳಲೇಬೇಡ ಕಾರಣ, ಯಾಕೆಂದರೆ
ಮೆದುಳಿನ ಎಡಭಾಗ ಕೆಲಸ ಮಾಡುವುದ ನಿಲ್ಲಿಸಿದೆ
ಸಂಪೂರ್ಣವಾಗಿ ...!! 

Friday 10 January 2014

ನಾ ಕಲ್ಲಾಗಿ ಬಿಡಬೇಕು ಮತ್ತೆ
ನೀ   ಕೆತ್ತಿದ ಚಿತ್ತಾರ, ಆಕಾರಗಳನ್ನೆಲ್ಲ
ಅಳಿಸಿ, ಸವೆಸಿ...
ಸುರಿವ ಮಳೆಗೆ ಒಡ್ಡಿಕೊಂಡು, ಚಿತ್ತಾರದ  ಸಂದಿಯ
ಧೂಳನ್ನೆಲ್ಲ ತೊಳೆದು ಕೊಚ್ಚ್ಚಿ
ಭೋರ್ಗಲ್ಲಾಗಿ ಬಿಡಬೇಕು ಮತ್ತೆ... 
ಆದರೆ ಒಂದೇ ಸಂಶಯ, ಆತಂಕ,
ತೊರೆದಾವೇ ನಿನ್ನ ಉಳಿಪೆಟ್ಟಿನ ನಿಶಾನೆ.. ??


Wednesday 8 January 2014

ನಗು 

1.ಅವ ಕವಿತೆ ಬರೆಯುತ್ತಾನೆ 
 ನಾ ಮುಗುಳುನಗುತ್ತೇನೆ 
 ಮತ್ತೆ ಬರೆಯುತ್ತಾನೆ 
 ನಾ ನಗುತ್ತೇನೆ... 


2. ಅವನು  :
ನಿನ್ನ ನಗು ಅಂದ್ರೆ ನಂಗೆ ತುಂಬಾ ಇಷ್ಟ  
ಅದು ತುಂಬಾ ನ್ಯಾಚುರಲ್ಲು .. 

ಅದ್ಹೇಗಪ್ಪಾ..??

ಹೇಗಂದ್ರೆ ನಿನ್ ಜೊತೆ ನಿನ್ನ ಕಣ್ಣೂ ನಗುತ್ತೆ...