Wednesday 15 April 2015

ಹೆಣ್ಣಾಗಬೇಕು 


ಹಕ್ಕಿಯಾಗಬೇಕು 
ಪಂಜರದಲ್ಲಿ ಬಂಧಿಯಾಗಲಾರದ, ಗಿಳಿಪಾಠಕ್ಕೆ ಪಕ್ಕಾಗದ 
ಆಕಾಶದೆತ್ತರಕ್ಕೆ ಹಾರಿ 
ನೀಲಿಬಾನಲಿ ಬಿಮ್ಮನೆ ವಿಹರಿಸುವ ಹದ್ದಾಗಬೇಕು.. 

ಹೂವಾಗಬೇಕು 
ಯಾರ ಜಡೆಯೂ ಏರದ,
ದೊಡ್ಡ ಮಹಲುಗಳ ಚಿತ್ತಾರದ ಹೂದಾನಿ ಸೇರದ 
ತನ್ನಷ್ಟಕ್ಕೆ ತಾನು ಬಿರಿದು ಕಂಪು ಚೆಲ್ಲುವ ಆಕಾಶಮಲ್ಲಿಗೆಯಾಗಬೇಕು... 

ನದಿಯಾಗಬೇಕು 
ಆಣೆಕಟ್ಟುಗಳ ಗೋಡೆಯ ಹಿಂದೆ ಕಣ್ಣೀರಿಡದ,
ಕಣಿವೆ ಕಂದರಗಳ ಕೊರೆದು,
ಕಾಡು ಮೇಡುಗಳಲ್ಲಿ ಜಲಪಾತವಾಗಿ 
ಸೊಕ್ಕಿ ಧುಮ್ಮಿಕ್ಕುವ ಬ್ರಹ್ಮಪುತ್ರೆಯಾಗಬೇಕು (ಕಾಳಿಯಾಗಬೇಕು)

ಹೆಣ್ಣಾಗಬೇಕು 
ಮೊಲೆಕಟ್ಟಿನ ಭಾರ, ಬಣ್ಣಗಳ ಸೋಗು, ಮೂಗುತಿಯ ಹೊರೆ 
ಕಾಲಂದಿಗೆಗಳ ಬೇಡಿ, ಇದಾವುದೂ ಇಲ್ಲದ,
ಸಾಗರನ ಅನಂತತೆಯ ಬೆತ್ತಲೆ ಮೈಗೆ ಆವಾಹಿಸಿಕೊಂಡು 
ಕಡಲ ಗಾಳಿ, ಅಲೆಗಳಿಗೆ ಸೆಡ್ಡು ಹೊಡೆದು ನಿಂತ 
ಅಪ್ಪಟ ಪ್ರಕೃತಿಯಾಗಬೇಕು.. 

Thursday 12 February 2015

ಮುತ್ತು
ಮುತ್ತಿಟ್ಟುಕೊಳ್ಳುತ್ತಿದ್ದೆವು ನಾವು
ಎದೆಯ ಅಹಂಕಾರವ ದಹಿಸುತ್ತ ಚೂರು ಚೂರು,
ಹೀರಿದೆವು ಗುಟುಕು ಗುಟುಕಾಗಿ ತಲೆಯೇರಿದ ಮದವ,
ಎಳೆದವು ಗಂಟಲಲ್ಲೇ ಬಿದ್ದು ಸಾಯುತ್ತಿದ್ದ ಮಾತುಗಳ
ನಾಲಿಗೆಯ ಮೇಲೆ, ಸೀದಾ ಪರಸ್ಪರರ ಆತ್ಮಗಳಿಗೆ ನಾಟುವಂತೆ..

ಅರೆ ನಿಮೀಲಿತ ಕಣ್ಣುಗಳು, ಧ್ಯಾನದ ಪ್ರಣತಿ
ತಡವರಿಸುತ್ತಿದ್ದ ಬೆರಳು, ಯೋಗಮುದ್ರೆ
ಉಸಿರಿನ ಏರಿಳಿತ, ಶ್ರುತಿಗೆ ಪಕ್ಕಾದ ಮಂದ್ರಸ್ವರ
ಮುಕ್ತ, ಅವ್ಯಕ್ತ ಭಾವ..
ಎಲ್ಲ ಹೇಳಿಕೊಂಡುಬಿಟ್ಟೆವು ನಾವು
ಮುತ್ತಿಟ್ಟುಕೊಳ್ಳುತ್ತಿದ್ದೆವು ನಾವು...