Friday 13 October 2017

ಅವ್ವ ಕೊಟ್ಟ ಸೇವಂತಿ ಸಸಿ 



















ಎರಡು ದೀಪಾವಳಿಯ ಹಿಂದೆಯೇ  ಅಲ್ಲವೇ
ನಿಮ್ಮವ್ವ ಈ ಸೇವಂತಿ ಸಸಿ ಕೊಟ್ಟಿದ್ದು? ಗೊಡ್ಡು ಇರಬೇಕು
ವರುಷ ಎರಡಾಯಿತು, ಒಂದು ಮೊಗ್ಗಿಲ್ಲಾ, ಹೂವಿಲ್ಲಾ
ಹೀಗೆಲ್ಲ ಅವರು ಮೂದಲಿಸುವಾಗ, ಪಾಪ
ಸೇವಂತಿ ನನ್ನೇ  ನೋಡುತ್ತಿತ್ತು
ಥೇಟ್ ನನ್ನವ್ವನಂತೆ!

ದಿನಕ್ಕೆ ಮೂರು ಬಾರಿ ನೀರು, ಮನೆಯಲ್ಲೇ ಶ್ರದ್ಧೆಯಿಂದ ತಯಾರಿಸಿದ
ಕಾಂಪೋಸ್ಟ್ ಗೊಬ್ಬರ, ವಾರಕ್ಕೊಮ್ಮೆ ಮಣ್ಣು ಹದಗೊಳಿಸುವುದು,
ಊಹುಂ, ಒಂದು ಮೊಗ್ಗಿಲ್ಲಾ, ಹೂವಿಲ್ಲಾ..
ಕಿತ್ತೆಸೆದುಬಿಡು, ಜಾಗವಾದರೂ ಖಾಲಿ ಆಗಲಿ
ನೆಡೋಣ ಗುಲಾಬಿ, ಇಲ್ಲವೇ ಟೊಮೆಟೊ, ಮೆಣಸಿನಕಾಯಿ, ಅಡುಗೆಮನೆಯ
ಉಪಯೋಗಕ್ಕಾದರೂ ಆಯಿತು ಎಂದರು ಅತ್ತೆ
ಆತಂಕಗೊಂಡ ನನ್ನ ಕರುಣೆಯಿಂದ ನೋಡಿ ಸೇವಂತಿ ಉಸುರುತ್ತದೆ 
'ತಾಳ್ಮೆ ಇರಲಿ ಮಗಳೇ' ಎಂದು, ಥೇಟ್ ನನ್ನವ್ವನಂತೆ!

ಮುಂಜಾನೆಯ ತರಾತುರಿಯಲ್ಲಿ, ಪಲ್ಯದ ಒಗ್ಗರಣೆಯ ನಡುವೆ
ಆಫೀಸಿಗೆ ಓಡುವ ಧಾವಂತದಲ್ಲೂ ಒಂದು ಚಣ ಸೇವಂತಿಯ ಮುಂದೆ ಕುಳಿತು
ಎಳೆಗಳ ಮುಟ್ಟಿ ಸವರಿ, ನೀನೆಂದು ಮೊಗ್ಗಾಗುವೆಯೇ ಸೇವಂತಿ ಎಂದು ನಿಡುಸುಯ್ಲಿಡುತ್ತೇನೆ,
ಇವಳಿಗೆಲ್ಲಿ ಹುಚ್ಚು ಹಿಡಿಯುತ್ತೋ ಎಂದು ಮನೆಯವರೆಲ್ಲ ಮೂಗು ಮುರಿಯುವಾಗ,
 ಹಿಡಿದ ಸೇವಂತಿ ಎಲೆ, ಕೈ ನೇವರಿಸಿ
ಸಾಂತ್ವನ ಹೇಳುತ್ತದೆ ಥೇಟ್ ನನ್ನವ್ವನಂತೆ!

ಎಂದಿನಂತೆ ಇಂದು ಮುಂಜಾನೆಯೂ ಎದ್ದು ಸೇವಂತಿಯ ಭೇಟಿಗೆ ಹೋದೆ
ಅರೆ!!! ಮೊಗ್ಗು!! ಒಂದು, ಎರಡು, ಮೂರು, ಹಾ ಅಲ್ಲೊಂದು, ಮತ್ತೆ ಇಲ್ಲೂ ಒಂದು
ಒಟ್ಟು ಹನ್ನೆರಡು, ಮನೆಯವರನ್ನೆಲ್ಲ ಕರೆದು ತೋರಿಸಿ, ಕೈ ತಟ್ಟಿ ಕುಣಿದೆ
ಸೇವಂತಿ ಎಲೆಮೇಲಿಂದ ಮಂಜುಹನಿ ಜಾರಿಸಿತು
ಆನಂದಭಾಷ್ಪವಾಗುವ ಥೇಟ್ ನನ್ನವ್ವನಂತೆ!

ಇನ್ನೀಗ ಪ್ರಸವ ವೇದನೆ, ಸೇವಂತಿಗೂ ಮತ್ತೆ  ನನಗೂ
ಮೊಗ್ಗು ಹೂವಾಗುವುದ ನೋಡುವ ವ್ಯಸನ
ಕಣ್ಣುನೆಟ್ಟು ಕಾಯುವುದೇ ಒಂದು ಗೀಳು..
ನೋಡ ನೋಡುತ್ತ ಇಷ್ಟಗಲ, ಅಷ್ಟಗಲ ನಿಧಾನವಾಗಿ
ಪಕಳೆ ಬಿಚ್ಚಿ, ಬಂಗಾರ ಹಳದಿ ಬಣ್ಣದ ಸೇವಂತಿ
ಕಂಪು ಸೂಸುತ್ತ ಅರಳೇ ಬಿಟ್ಟವು
ಥೇಟ್ ನನ್ನವ್ವನ ಆತ್ಮದಂತೆ!!

Thursday 3 August 2017

ಓ ಗಂಡಸರೇ ನೀವೆಷ್ಟು ಒಳ್ಳೆಯವರು

ಓ ಗಂಡಸರೇ ನೀವೆಷ್ಟು ಒಳ್ಳೆಯವರು

ಓ ಗಂಡಸರೇ ನೀವೆಷ್ಟು ಒಳ್ಳೆಯವರು
ಸುಕೋಮಲೆ, ಸುಭಾಷಿಣಿ, ಕ್ಷಮಯಾ ಧರಿತ್ರಿ
ಎಂದೆಲ್ಲ ನನ್ನ ಪರಿಪರಿಯಾಗಿ ಬಣ್ಣಿಸುವ
ಓ ಗಂಡಸರೇ ನೀವೆಷ್ಟು ಒಳ್ಳೆಯವರು

ಪಾರ್ಲರಿನ ಹುಡುಗಿಯ ಮುಂದೆ ಬೆತ್ತಲಾಗಿ ನಿಂತು
ಬೆಲ್ಲದ ಪಾಕವ ಮೈಗೆಲ್ಲ ಅಂಟಿಸಿಕೊಂಡು
ಜೀವ ಹೋಗುವ ನೋವಾದರೂ
ರೋಮರಹಿತ ದೇಹವ ಮಟ್ಟಸವಾಗಿಸಿಕೊಳ್ಳುವ ನನ್ನ ಮುಟ್ಟಿ ನೋಡಿ
ಆಹಾ ಎಷ್ಟು ನುಣುಪು ಎಂದು ಹೊಗಳುವ
ಓ ಗಂಡಸರೇ ನೀವೆಷ್ಟು ಒಳ್ಳೆಯವರು!!

ಲಕ್ಷಗಟ್ಟಲೆ ದುಡಿದು ನಿಮ್ಮ ಕೈಗಿಟ್ಟು
ಸೀರೆ ಕೊಡಿಸು ಒಡವೆ ಕೊಡಿಸೆಂದು ದುಂಬಾಲು ಬಿದ್ದು
ಆ "ಎಲ್ಲವ ''  ಕೊಡಿಸಿಕೊಂಡು ಹಿಗ್ಗಿನಿಂದ ಬೀಗುವ
ನನ್ನೆಡೆಗೆ ನೋಡಿ ತೃಪ್ತಿಯಿಂದ ಹೃದಯ ತುಂಬಿಕೊಳ್ಳುವ
 ಓ ಗಂಡಸರೇ ನೀವೆಷ್ಟು ಒಳ್ಳೆಯವರು!!
 
 ನಸುಕಿನಲೇ ಎದ್ದು, ನೀನೇ ಇಂದ್ರ ನೀನೇ ಚಂದ್ರ
ನೀನೇ ಪರದೈವ ಎಂದು ಕಾಲುಮುಟ್ಟಿ,
 ನೀ ಕಟ್ಟಿದ ತಾಳಿಯೇ ದುಷ್ಟ ರಕ್ಷಕ
ಎಂದು ಕಣ್ಣಿಗೊತ್ತಿಕೊಳ್ಳುವಾಗ ಅದ ನೋಡಿ ಕಣ್ಣ ತುಂಬಾ
ಪ್ರೀತಿಯ ಹೊಳಪ ತುಂಬಿಕೊಳ್ಳುವ
ಓ ಗಂಡಸರೇ ನೀವೆಷ್ಟು ಒಳ್ಳೆಯವರು!!

ನನ್ನ ಮನುಷ್ಯ ಜಾತಿಯ ಹೊಟ್ಟೆ ಕೆಟ್ಟು
ದೇವರು ಕೊಟ್ಟ ಪೀಪಿ ಸದ್ದುಮಾಡುವಾಗ,
ಕೆಲವೊಮ್ಮೆ ಭೂರಿ ಭೋಜನದ ಆನಂದದಿಂದ ಉಬ್ಬಿ
ಅನ್ನನಾಳ ಓಓಓ ...ಬ್ ಎಂದು ಸದ್ದು ಮಾಡುವಾಗ
ಮತ್ತೊಮ್ಮೆ ನಾ ಸುಕೋಮಲೆ ಎಂದು ಮನವರಿಕೆ
ಮಾಡಿಕೊಡುವ ಓ ಗಂಡಸರೇ ನೀವೆಷ್ಟು ಒಳ್ಳೆಯವರು!!


Wednesday 2 August 2017

ಇವರು

"ಇವರು"


ಬೇಲಿ ಕಟ್ಟಬಾರದು ನೀವು ಇವರಿಗೆ
ಮನುಷ್ಯ ಜಾತಿಯ "ಇವರ" ಆಸೆಗಳಿಗೆ

ದಟ್ಟ ಜನಜಂಗುಳಿಯ ಖಾಲೀತನಗಳ
ಖುಲಾಸೆ ಮಾಡಿಕೊಳ್ಳಲು ಬಿಡಿ ನೀವು
ಅನ್ನ ನೀರುಗಳೆಂದೂ ಆತ್ಮವ ತುಂಬಿಸಿಯೇ ಇಲ್ಲ

ಮುಪ್ಪಿನ ಪಹರೆಯಲ್ಲಿ ಕುದಿಯುತ್ತಿರುವ ಮೋಹಗಳ
ಉಕ್ಕಲು ಬಿಡಿ ನೀವು
ತುಟಿಗಳೆಂದೂ ಅದಿರೇ ಇಲ್ಲ, ಮೈಯೆಂದೂ ನವಿರೆದ್ದ ಖುನೇ ಇಲ್ಲ

ಕಿಟಕಿಯ ಸರಳುಗಳೀಚೆ ಗಸ್ತು ಹೊಡೆಯುತ್ತಿರುವ
ಕನಸುಗಳ ವಿಹರಿಸಲು ಬಿಡಿ  ನೀವು
ರೆಕ್ಕೆಗಳ ಅಸ್ಮಿತೆಯೇ ಗೊತ್ತಿಲ್ಲ ಇವಕ್ಕೆ

ಸೆರಗಿನಡಿಯ ತುಂಬಿದೆದೆಯ ಆಳದಲ್ಲಿರುವ
ರಂಗುರಂಗಿನ ಬಣ್ಣಗಳ ಪ್ರತಿಫಲಿಸಲು ಬಿಡಿ
ಬೆಳಕಿನ ನಸೀಬೇ ದಕ್ಕಿಲ್ಲ ಇವಕ್ಕೆ


Friday 28 July 2017

ನಾನೆಂದರೆ 

ಇದು ನಾನಲ್ಲವೇ ಅಲ್ಲ
ನನ್ನ ನೆರಳಿರಬೇಕು
ನಾ ಹೀಗೆ ಬಣ್ಣಗೇಡಿಯಾಗಿ,
ಇಡೀ ಮೈಗೆ ಕಪ್ಪು ಸುರುವಿಕೊಂಡಿರಲು ಸಾಧ್ಯವೇ ಇಲ್ಲ, 
ನಾನೆಂದರೆ ಪ್ರಖರ ಸೂರ್ಯ ರಶ್ಮಿ

ಕನಸುಗಳ ಮಾರಿಕೊಂಡ ಕವಿತೆ ಇರಬೇಕು
ಬರೀ ಖಾಲಿ ಖಾಲಿ ಭಾವಹೀನ ವ್ಯಾಕರಣ
ನಾನೆಂದರೆ ಸೆಳೆಯುವ ನಿತ್ಯಹರಿದ್ವರ್ಣ

ಛೇ, ರೆಕ್ಕೆ ಕತ್ತರಿಸಿಕೊಂಡ ಹಕ್ಕಿ ಇರಬೇಕು
ನಾನೆಂದರೆ ಸುಟ್ಟ  ಬೂದಿಯಿಂದೆದ್ದು
ಆಗಸಕ್ಕೆ ನೆಗೆಯುವ ಫೀನಿಕ್ಸ್