Friday 28 February 2014



ನಾ ಬಾಗೇಶ್ರಿ ಹಾಡುವಾಗೆಲ್ಲ
ನಿನ್ನದೇ ನೆನಪು..
ರಾತ್ರಿಯ ಆಲಾಪದಲ್ಲೆಲ್ಲ
ನಿನ್ನದೇ ಗುಂಗು..
ನಿಶಾದಕ್ಕೆ ಶ್ರುತಿ ಸೇರುತ್ತಿದ್ದಂತೆ
ಕೊರಳ ಸೆರೆಯೆಲ್ಲ ದೈನ್ಯ.. 
ನಾಳೆ ಮುಂಜಾವು ನೀ ದಾರಿಯಲ್ಲೆಲ್ಲೋ
ಸಿಕ್ಕುಬಿಡು..
ಷಡ್ಜ ದ ವಾದಿಗೆ, 'ಮ'ಧ್ಯಮದ ಸಂವಾದಿಯಂತೆ
ಆಗಿಬಿಡಲಿ ಪುನರ್ಮಿಲನ..
 

Sunday 9 February 2014



ಓದು                                                      

ನಿನ್ನನ್ನೊಮ್ಮೆ ಓದಬೇಕಿದೆ,
ತೀವ್ರವಾಗಿ, ಮುನ್ನುಡಿಯಿಂದ ಕೊನೆಪುಟದವರೆಗೆ... 
ನಾನಂತೂ ಎಂದಿಗೂ ತೆರೆದ ಪುಸ್ತಕ...  
ಪ್ರತೀ ಅಧ್ಯಾಯವೂ ಸ್ವಚ್ಚಂದ, ಸರಳ 
ತೀರ ನಿನ್ನೆದೆಗೆ ನಾಟಿಬಿಡಬಹುದು...  
ಎಲ್ಲ ಸಾಲಲ್ಲೂ ಅಪ್ಪಟ 'ನಾನು' 
ನಿನ್ನ ನೆಚ್ಚಿನ ಪುಸ್ತಕದ ಪಟ್ಟಿಗೆ ಸೇರಿಯೂಬಿಡಬಹುದು... 
ಒಮ್ಮೆ ಅನುವು ಮಾಡಿಕೊಂಡು ಓದಿಯೇ ಬಿಡು 
ಹಾಗೇ ನಿನ್ನನೊಮ್ಮೆ ಓದುವ ಅವಕಾಶವನ್ನೂ ನೀಡಿಬಿಡು.. 






ಜರೂರಿ 


ಪ್ರೀತಿಯಂಗಡಿಯಲ್ಲಿ 
ಹೃದಯ ಗಿರವಿ ಇಟ್ಟಾಗಿದೆ.. 
ನನಗೀಗ ಅದ ಹಿಂಪಡೆಯುವ ಜರೂರಿ
ಅರ್ಧ ಸೇರು ಕಣ್ಣೀರು, ಒಂದು ಮಣ  ನಿಟ್ಟುಸಿರು, ರಾಶಿ ನೆನಪುಗಳು
ಸದ್ಯಕ್ಕಿರುವುದು ಇಷ್ಟೇ, ಒಪ್ಪಿಸಿಕೋ 
ಬಾ ವ್ಯವಹಾರ ಚುಕ್ತಾ ಮಾಡಿಬಿಡೋಣ, ಏಕೆಂದರೆ 
ನನಗೀಗ ಹೃದಯ ಹಿಂಪಡೆಯುವ ಜರೂರಿ...








Monday 3 February 2014

                             ಗುಲ್ ಮೊಹರ್ ಳ ಸ್ವಗತ 

ಹೇ ಗುಲ್ ಮೊಹರ್ 
ನಿನ್ನಗುಲ್ ಮೊಹರ್  ಗಿಡದಿಂದ
ಕೆಲ ಹೂಗಳನ್ನ ಕಿತ್ತು ತಾ
ಕೆಂಪು  ಮತ್ತು ಬಿಳಿ ಮಿಶ್ರಿತ ಬಣ್ಣ                                                         

ನನ್ನ ಶವಪೆಟ್ಟಿಗೆಯನ್ನು ಸಿಂಗರಿಸು 

ಸಂಜೆ ಸರಿಯುವ ಸೂರ್ಯನಂತೆ ಆತ್ಮ  ...

 

ಇಕೋ ಇಲ್ಲಿವೆ ನನ್ನ ಗುಲ್ ಮೊಹರ್                                                  
 ಗಿಡದ ಕೆಂಪು ಬಿಳಿ  ಹೂಗಳು,             
ಅವುಗಳೊಡನೆ,  ನಿನ್ನೊಡನೆನಾನೂ ಬರುವೆ 
ಸ್ವರ್ಗವೋನರಕವೋಯಾವುದಾದರೂ ಸರಿ
ಅಲ್ಲಿ ಮತ್ತೆ ಉದಯಿಸೋಣ
ಚುಮು ಚುಮು ಮುಂಜಾವಿನ ರವಿಯಂತೆ.....