Wednesday 19 March 2014

ಈ ಶತಮಾನದ ಮಾದರಿ ಹೆಣ್ಣು   

   

ಎದೆಯೊಳಗಿನ ಕತ್ತಲನ್ನೆಲ್ಲ, ಕುಂಚಕ್ಕೆ ಸವರಿ 
ಕಣ್ಣ ಕಾಡಿಗೆ ಮಾಡಿಕೊಂಡೆ, ನೋಟವೆಲ್ಲ ಈಗ ತೀಕ್ಷ್ಣ ..!
ಗುಂಡಿಗೆಯ ಹೆಪ್ಪುಗಟ್ಟಿದ ರಕ್ತವ 
ಬಾಚಿ ಮೆತ್ತಿಕೊಂಡೆ, ತುಟಿಗೆ ಹೊಳೆವ  ಕೆಂಪು ರಂಗು..!

ಅಂತರಂಗದ ವೈರುಧ್ಯಗಳನ್ನೆಲ್ಲ ನುಣ್ಣಗೆ ಪುಡಿಮಾಡಿ 
ಬಳಿದುಕೊಂಡೆ, ಬಿಳಿಚಿದ್ದ ಕೆನ್ನೆಯೆಲ್ಲ ಫಳ ಫಳ..! 
ತಲೆಯೇರಿ ಸವಾರಿ ಮಾಡುವ ಕುಹಕಗಳ, ಹಿಡಿದು ಕಟ್ಟಿ
 ಮಟ್ಟಸವಾಗಿ ಹೆಣೆದೆ, ಆಹಾ ನವೀನ ಕೇಶವಿನ್ಯಾಸ..! 

ಯಾವಾಗೆಂದರೆ ಆವಾಗ ಬಂದಪ್ಪಳಿಸುವ, ಅಕರಾಳ ವಿಕರಾಳ
 ಚೀತ್ಕಾರಗಳಿಗೆ ತೋರುತ್ತೇನೆ ಜಾಣಕಿವುಡು, 
ಸೋಲೊಪ್ಪಿಕೊಂಡ ಅವನ್ನು ಕಿವಿಗೆ ಇಳಿಬಿಟ್ಟೆ, ಆಕರ್ಷಕ ಕಿವಿಯೋಲೆ..! 

ಹೆಜ್ಜೆ ಹೆಜ್ಜೆಗೂ ಕಾಲಿಗೆ ತೊಡರುವ ಕತ್ತಿಯಂಚಿನ ಮೇಲೆ ನಡೆದ ದಾರಿ  
ಇನಿತೂ ತೊಂದರೆಯಿಲ್ಲ, ಒಪ್ಪವಾಗಿ ಸುತ್ತಿ ಮಾಡಿಕೊಂಡೆ ಕಾಲ್ಗೆಜ್ಜೆ,
ಮುಂಬರುವ ಕವಲುದಾರಿ, ತಿರುವುಗಳಿಗೆಲ್ಲ ಘಲ್ ಘಲ್ ಸದ್ದೇ ಎಚ್ಚರದ ಕರೆಗಂಟೆ..! 

ಶ್ವಾಸದಿಂದ ಉಕ್ಕಿಬರಲು ಹವಣಿಸುವ ದುಃಖದ ಮಡುವ ಹತ್ತಿಕ್ಕಿ, 
ಅಲ್ಲೇ ಘನೀಕರಿಸುತ್ತೇನೆ, ಎಂಥವರಲ್ಲೂ
 ಆಸೆ ಹುಟ್ಟಿಸುವ ಬಿಗಿಯಾದ ಎದೆಕಟ್ಟು..!

ಭೂತದ ಛಾಯೆ ಕವಿದಿರುವ ದೇಹಕ್ಕೆ, 
ಭವಿಷ್ಯದ ಕನಸಿನ ಗರಿಗರಿ ಪೋಷಾಕು, ವರ್ತಮಾನ ಚಲಿಸಬೇಕಲ್ಲ..??

ಹಾ ಇಗೋ ಬಂದೆ, ನಾನೀಗ ಸಿದ್ಧ, ನಿಮ್ಮ ಕ್ಯಾಮೆರಾದ ಕಣ್ಣಿಗೆ
 ಕ್ಲಿಕ್ಕಿಸಿ, ತೋರುತ್ತೇನೆ, ನಕಲಿ ನಗೆ.. 
ಹೃದಯ ಹಗುರಾಗಿ ತೇಲಿಬಂದ ಹೂ ನಗೆಯಲ್ಲ
 ತೀರ ಕಿಬ್ಬೊಟ್ಟೆಯಲ್ಲಿ ಅಳದೇ ಮುಚ್ಚಿಟ್ಟ ನಗೆ..!

ಅರೇ, ನೋಡಿ ಅಲ್ಲಿ ಅವಳ ಛಾಯಾಚಿತ್ರ,
ವಾಹ್, ಎಷ್ಟು ಆಕರ್ಷಕ, ಏನು ಮೋಡಿ.. 
ಪುಣ್ಯವಂತೆ ಇವಳು, ಎಷ್ಟು ತೀವ್ರವಾಗಿ ಬದುಕುತ್ತಾಳೆ..!! 
ಸುಂದರ ಇವಳ ಜೀವನ, ಇವಳಂತೆಯೇ.. 
ಪಾಪಿ, ನಮಗೆಲ್ಲ ಹೊಟ್ಟೆ ಉರಿಸುತ್ತಾಳೆ.. 

ಅಬ್ಬಾ, ಎಷ್ಟು ಕರಗತ ನನಗೀ ನಗುವ ಕಲೆ,  ನಟಸಾರ್ವಭೌಮೆ..!
ಹೌದು, ಕಟ್ಟಿ ಎಲ್ಲೋ  ಎಸೆದು, ಮರೆತ ಬಯಕೆಗಳ ಗಂಟಿನಾಣೆ,  
ಇದು ನಾನು
 ಈ ಶತಮಾನದ ಮಾದರಿ ಹೆಣ್ಣು..!!

2 comments:

  1. ಒಳಗಡೆ ನೂರು ಚಿಂತೆಗಳಿದ್ದರೂ ಎಲ್ಲರ ಮುಂದೆ ನಗುವನ್ನೇ ಸಂಕ್ರಮಿಸುತ್ತಾಳೆ ಆಕೆ.
    ಯಾಕೋ ಈ ಕವನ ಓದಿದ ಮೆಲೆ ಮ್ಲಾನನಾದೆ.
    ಪುಟ್ಟಿ

    ReplyDelete
  2. ಯಾಕೇ ಕೂಸೆ ಜೀವನಲ್ಲಿ ಅಸ್ಟೊಂದು ನೊಂದು ನುಡಿದಂತಿದೆ ನಿನ್ನ ಪ್ರತೀ ಸಾಲು ಕಿತ್ತೊಗೆ ಜಿಗುಪ್ಸೆಯ ಬೇರು ಬೆಳೆಸಿಕೋ ನಲ್ಮೆಯ ಚಿಗುರು.......!!!

    ನಿನ್ನ ಕವನದ ಸಾಲಿಗೆ ನನ್ನ ಒಂದೇ ಮದುರ ನುಡಿ " ಅದ್ಬುತ"..!

    ReplyDelete