Friday 13 June 2014

ಯಕ್ಷಪ್ರಶ್ನೆ
ನನ್ನವನ ಯಕ್ಷಪ್ರಶ್ನೆ,                                        
ಪ್ರತೀ ಪ್ರಣಯದ ನಂತರವೂ
ಅದೇಕೆ ನನ್ನೆದೆಯಲ್ಲಿ ಹುದುಗಿ
ಕಣ್ಣೀರಿಡುತ್ತಿ..??

ಕೆದರಿದ ಜೊಂಪೆಗೂದಲ ಮೇಲೆತ್ತಿ ಕಟ್ಟುವಾಗ
ಬೆತ್ತಲಾದ ಬೆನ್ನಮೇಲೆ ನಿನ್ನ ಬೆರಳಿನ  ಚಿತ್ತಾರ..
ಅದೇನು ಬರೆಯುತ್ತೀಯೊ, ಜೀವ  ಭಾರ ಹೊತ್ತ
ಬಡಕಲು ಸೊಂಟಕ್ಕೀಗ ಮರುಜೀವ..

ದುಗುಡಗಳೆಲ್ಲ ಘನೀಕೃತಗೊಂಡು ಮೈವೆತ್ತ
ಎದೆಯ ಆಕಾರದಲ್ಲೆಲ್ಲ ನಿನ್ನೊಡಲ ಬಿಸಿಯುಸಿರ ಸ್ಪರ್ಶ,
ಅಪ್ಪಟ ತಾಯಿಯ ಅನುಭೂತಿ
ಕರಗುತ್ತಿದಿಯೆನೋ ಕಿಲಿಮಂಜಾರೋ ಪರ್ವತ..

ಮುಂಗುರುಳ ಸರಿಸಿ, ಹಣೆಗೆ ತುಟಿಯೊತ್ತಿದ
ನಿನ್ನ ಕಣ್ಣಲ್ಲಿ ಕಣ್ಣು ನೆಟ್ಟರೆ,ಆತ್ಮವ ಹೊಕ್ಕು
 ಕಳೆದಿರುವ ನನ್ನ ಅಲ್ಲಿ ಪಡೆಯುವ ಸಂಭ್ರಮ.. 
ನೋವೆಲ್ಲ ಹೀರಿದ ಅಧರಗಳ ಮೇಲೆ
ಬೆರಳಿಟ್ಟು ನಾನೇ ಮಾಡಿಕೊಳ್ಳುವ ಧೃಡೀಕರಣ..

ಈ ಬಾಹುಬಂಧನದಲ್ಲಿ ಇಡೀ ಜಗದ ವಿಸ್ತಾರ,
ಧನ್ಯತೆಯ ಸ್ಥಾಯೀಭಾವ, ಉತ್ಕಟ ಪ್ರೇಮದ ಸಾಕ್ಷಾತ್ಕಾರ,
ಕಾಣುತ್ತೇನಲ್ಲಾ ನನ್ನತನದ ಮರು ಆವಿಷ್ಕಾರ
ಅದಕ್ಕೆ ಏನೋ, ಪ್ರತೀ ಕೊನೆಯಲ್ಲೂ ಕಣ್ಣೀರು.. 

4 comments:

  1. ಕವಿತೆಯ ಹೂರಣ ಮತ್ತು ಅದನ್ನು ಕಟ್ಟಿಕೊಟ್ಟ ರೀತಿಯಲ್ಲಿನ ಅಪ್ಪಟತನ ಮನಸೆಳೆಯಿತು.
    ಭಾವೋತ್ಕರ್ಷದ ರಸ ಗಳಿಗೆಗಳು ಮನೋ ವಿಕಸನಕ್ಕೆ ಮತ್ತು ಸಾಂಗತ್ಯದ ಸುಸ್ಥಿತಿಗೆ ಪೂರಕ ಸಂಗತಿಗಳು.

    ReplyDelete
  2. ​ಬಾಹುಬಂದನದಲ್ಲಿ ಜಗದ ವಿಸ್ತಾರ ಮೂಡಿಸುವ ಕಲೆ ​
    ​ಅಮೋಘ, ಅದ್ಭುತ ಪದಜೊಡಣೆ ಶುಭವಾಗಲಿ...!!!​

    ReplyDelete
  3. ಕಮೆಂಟ್ ಏನು ಹಾಕ್ಬೇಕು ತಿಳಿಯುತ್ತಿಲ್ಲ. ಕವಿತೆ ಸಖತ್ ರೊಮ್ಯಾಂಟಿಕ್ ಆಗಿದೆ. ಅದಕ್ಕಿಂತ ಇಂಟ್ರೆಸ್ಟಿಂಗ್ ಅನ್ಸಿದ್ದು ನಿಮ್ಮ ಪ್ರೊಫೈಲು. ಬದುಕಿನ ಉತ್ಸಾಹ ನನಗೂ ಇಷ್ಟವಾಯ್ತು.

    ReplyDelete