Saturday 17 February 2024

ಸತ್ಯವನ್ನೇ ಹೇಳುತ್ತೇನೆ

 ಸತ್ಯವನ್ನೇ ಹೇಳುತ್ತೇನೆ, ಸತ್ಯವನ್ನಲ್ಲದೇ ಬೇರೇನನ್ನೂ ಹೇಳುವುದಿಲ್ಲ,

ಅಂದುಕೊಳ್ಳುತ್ತಲೇ

ನೆನಪಾಗುತ್ತದೆ ಸತ್ಯ ತುಂಬಾ ಕಹಿ ಎಂದು

ಅಷ್ಟಕ್ಕೂ ಸತ್ಯವನ್ನು  ಕೇಳಿ, 

ಅದು ಇದ್ದಂತೇ ಸ್ವೀಕರಿಸುವರು ಯಾರಿದ್ದಾರೆ ಇಲ್ಲಿ

ಇರುವುದೆಲ್ಲವ ಬಿಟ್ಟು, ಇರದುದರೆಡೆಗೆ ಜೀವ ತುಡಿಯುತ್ತದೆ ಎಂದರೆ ಒಪ್ಪಿಗೆಯೇ?? 

ಒಪ್ಪವಾಗಿ ಸಂಸಾರ ಮಾಡುತ್ತಿರುವಾಗ 

ಹೀಗೆ ಎಲ್ಲವನ್ನು ಬಿಟ್ಟು ನಡೆಯುವ ಆಸೆಯ

ಎದೆಯಲ್ಲಿ ಕಾಪಿಡುವ ಸತ್ಯ  ಸಮ್ಮತವೇ?


ಸೀತೆ ಸಾವಿತ್ರಿಯರಿಗೆ ಉಧೋ ಉಧೋ ಎನ್ನುವ ನಿಮ್ಮ ಮುಂದೆ

ಅಮೃತಮತಿಯ ತುಮುಲ-ದುಗುಡಗಳ ಸತ್ಯಕತೆ ಹೇಳಬೇಕು,

ಮಮ್ಮಲ ಮರುಗುವ ಛಾತಿ ಇದೆಯೇ?


ಬಿಳಿಯೇ ಪರಮಶ್ರೇಷ್ಠ ಪರಿಶುದ್ಧ ಅಂದುಕೊಳ್ಳುವ ನಿಮಗೆ

ಕಪ್ಪಷ್ಟೇ ಅಲ್ಲ, ಹಲುವು  ರಂಗಿನ ಕನಸುಗಳ ಸತ್ಯ , ಹುಚ್ವುಚ್ಚು ಅನಿಸದಿದ್ದರಷ್ಟೇ  ಸಾಕು 

ನೀವೆಲ್ಲ ಪಾದ-ಪೂಜೆಗೆ ಅಣಿಯಾಗಿರುವ ಈ‌ ಹೊತ್ತು

ನಾ ಬಂಡಾಯದ ಹಾಡು ಹೆಣೆಯುತ್ತಿರುವ ಸತ್ಯ ಪಥ್ಯವೇ?


ಈ ಬದುಕು ನನ್ನದಷ್ಟೇ ಮತ್ತು ಬೇಕಿರುವುದು ಹಿಡಿ ಪ್ರೀತಿ

ಆದರೆ 'ಹಿಡಿ ಪ್ರೀತಿ' ಅಷ್ಟೇ ಅಲ್ಲ ಎನ್ನುವ ಕಟುಸತ್ಯಕ್ಕೆ 

ತೋರುವ  ಜಾಣಕುರುಡು ಇಲ್ಲಿ ಜಗಜ್ಜಾಹೀರು,

ಒಳ್ಳೇತನದ ಹಣೆಪಟ್ಟಿಯ ಕಿತ್ತಸೆಯುವುದು ಎಳ್ಳಷ್ಟೂ ಕಷ್ಟವಲ್ಲ

ಎನ್ನುವ ಸತ್ಯ ಉವಾಚ ಹೇಳುವುದೊಂದಿದೆ

ದಕ್ಕಿಸಿಕೊಳ್ಳುವ ತಾರ್ಕಿಕತೆ ಇದೆಯೇ?


 ನಿಮ್ಮ ಎದೆಗೋಡೆಗಳಿಗೆ ಅಂಟಿಸಿಕೊಂಡಿರುವ ಅಹಮಿಕೆಯ ಬಗ್ಗೆ ದುಃಖ-ಬೇಜಾರುಗಳಿಲ್ಲ, ಇರುವುದು ಕೇವಲ ಕರುಣೆ ಎಂಬ ಸತ್ಯ ಕೂಗಿ ಕೂಗಿ ಹೇಳಬೇಕಿದೆ, ಕಿವಿಗೊಡುವಿರಾದರೆ!!

ಬದುಕು ರೈಲುಹಳಿಗಳಂತೆ, ಎಂದೂ ಒಂದನ್ನೊಂದು ಸೇರವು

ಹೋದರೆ ಹೋಗಲಿ ಬಿಡಿ, ಹಳಿ ತಪ್ಪಿದರೇನಂತೆ

ಅಂದುಕೊಳ್ಳುವುದು ಅದೆಷ್ಟು ಘೋರಸತ್ಯ!! 

ನಿಮ್ಮ ಕಿವಿಗಿದು ರುಚಿಸುವುದೇ? 



No comments:

Post a Comment