Saturday 17 February 2024

ಮಸಿ ಅರಿವೆಯ ಸ್ವಗತ



ಮಸಿ ಅರಿವೆಯ ಸ್ವಗತ

ಹಾ, ಎಷ್ಟು ಚಂದ ಇದ್ದೆ ನಾನು
ಮನೆ ಒಡತಿ ತನ್ನ ಹೂಮೈಗೆ
ನನ್ನ ಸುತ್ತಿಕೊಂಡು ಕನ್ನಡಿಯೆದರು
ನಿಂತಾಗ ನಾನೆಷ್ಟು ಬೀಗುತ್ತಿದ್ದೆ
ಗತ್ತಿನಿಂದ ಸೆರಗಾಗಿ ಹಾರುತ್ತಿದ್ದೆ.

ಶುದ್ಧ ಹಾಲಿನ ಬಣ್ಣದೊಳಗೆ ಹೂಬಳ್ಳಿ
ಎಲೆಗಳ ಚಿತ್ತಾರ
ದಂಡೆಗೊಂದಿಷ್ಟು ನಾಜೂಕಾದ  ಜರಿ ಅಂಚು
ಮುಟ್ಟಿದರೆ ಹಾಯ್ ಎನಿಸುವಷ್ಟು ನವಿರು(ಮೃದು)
ಶುದ್ಧ ಹತ್ತಿಯಿಂದ ಕೈಯಲ್ಲೇ ನೇಯ್ದದ್ದಂತೆ
ನೋಡಿ ಅಲ್ಲಿ ಆಕೆ ಉಟ್ಟ ಸೀರೆ!
ಆಗಂತೂ ಹೇಗೆ ಹೆಮ್ಮೆಯಿಂದ ಉಬ್ಬಿ 
ಹೆಜ್ಜೆ ಹೆಜ್ಜೆಗೂ ನೆರಿಗೆಯಾಗಿ ಪುಟಿದಿದ್ದೆ

ಭವ್ಯ ಬಂಗಲೆಗಳು, ದೊಡ್ಡ ಮಹಲುಗಳು
ಜಾತಣಕೂಟ, ಸಂಗೀತ ಕಛೇರಿ,ನಾಟಕಗಳು
ಹೋದಲ್ಲೆಲ್ಲಾ ಮೆಚ್ಚುಗೆ ಗಳಿಸಿ, ಒಡತಿಯ
ಅಂದ ಇಮ್ಮಡಿಗೊಳಿಸಿ ಮಿಂಚುತ್ತಿದ್ದೆ
ಮತ್ತೆ ವಾಷಿಂಗ್ ಮಷೀನಿನ ಘಮಗುಡುವ
ಸಾಬೂನಿನ ಸ್ನಾನ ಮತ್ತೆ ಗಂಜಿ ಹಾಕಿದ ಗರಿಗರಿ ಇಸ್ತ್ರಿ

ಈಗೀಗ ಕನ್ನಡಿ ಕಾಣುವುದೇ ಇಲ್ಲ
ಒಂದೊಂದು ಸಲ ಆಕಸ್ಮಾತಾಗಿ ಎದುರಾಗುವ
ಪಾತ್ರೆ, ತಟ್ಟೆಗಳಲ್ಲಿ ಹೀಗೊಂದಿಷ್ಟು ಮುಖದರ್ಶನ
ಅರೆ...?? ಇದು ನಾನೇನಾ?
ಹೀಗೇಕೆ ಕಪ್ಪು ಸುರುವಿದ್ದಾರೆ ನನ್ನ ಮೇಲೆ
ಮತ್ತೆ ಅಲ್ಲೊಂದು ಇಲ್ಲೊಂದು ತೂತು
ನಾನು ಹೂವಿನ ಚಿತ್ತಾರದ ಸೆರಗೋ?
ಜರಿಯಂಚಿನ ದಂಡೆಯೋ? ಇಲ್ಲಾ
ಪುಟಿಯುತ್ತಿದ್ದ  ನೆರಿಗೆಯೋ..?
ಊಹುಂ! ನನ್ನ ಅಸ್ತಿತ್ವವೇ ಹೊಳೆಯುತ್ತಿಲ್ಲ

ನನ್ನಡೊತಿಗೆ, ನನ್ನ ಕಂಡರೆ ದಿವ್ಯ ನಿರ್ಲಕ್ಷ್ಯ
ಒಮ್ಮೊಮ್ಮೆ ನೆಲಗುಡಿಸುವ ಅರಿವೆಯಾದರೆ
ಇನ್ನೊಮ್ಮೆ, ಡಬ್ಬಿಗಳ ಪೇರಿಸಿಟ್ಟ ಮಾಡಿನ
ಧೂಳು ಕೊಡೆಯುವ ಕಾರ್ಯ
ಬಿಸಿ ಹಾಲಿನ ಪಾತ್ರೆ ಮುಟ್ಟುವಾಗಂತೂ
ಮೈಯೆಲ್ಲಾ ನಡುಕ
ಸೋಪಿನ ಬುರುಗೇಳುವ ನೀರಿನಲ್ಲಿ ಮಿಂದು
ಅದೆಷ್ಟು ದಿನವಾಯಿತೋ??
ಅಭ್ಯಾಸವಾಗಿದೆ ವಾರಕೊಮ್ಮೆ ಕೆಲಸದ ಕಲ್ಪನಾ
ಮಾಡಿಸುವ ಒಣ ಒಣ ಸ್ನಾನ

ಇನ್ನೇನಿದ್ದರೂ, ಇನ್ನೊಂದಿಷ್ಟು ಮಸಿ, ದೂಳು
ಹೇರಿಕೊಂಡಿರಬೇಕು
ಗತವೈಭವದ ಚಹರೆಗಳ ಗೋಡೆ ಮೇಲಿನ
ಚಿತ್ರಪಟದಲ್ಲಿ ಹುಡುಕಬೇಕು.

No comments:

Post a Comment