Saturday 17 February 2024

ಹೀಗೊಂದು ರವಿವಾರ

 ಹೀಗೊಂದು ರವಿವಾರ


ನಾಳೆ ರಜೆಯಲ್ಲವೇ, ಇದೊಂದು ಕೆಲಸ ಈ‌ರಾತ್ರಿಯೇ ಮುಗಿಸಿಬಿಡುವೆ, ಬೆಳಗ್ಗೆ ಆರಾಮಾಗಿ, ಲೇಟಾಗಿ ಎದ್ದರಾಯಿತು ಇನ್ನೇನು ಹನ್ನೆರಡಾಗುತ್ತಾ ಬಂತು..


ಥೋ, ಈ ಹಾಲಿನವನೊಬ್ಬ ಆರುಗಂಟೆಗೆಲ್ಲ ಬಂದು ಬಾಗಿಲು ತಟ್ಟುತ್ತಾನೆ, ಹಾss ಬಂದೆ ಬಂದೆ ತಡಿಯಪ್ಪಾ, ಹಾಲು ಮತ್ತೆ ನೀರೋ ನೀರು, ಸಣ್ಣಕೂಸಿಗೆ ಕುಡಿಸುವ ಹಾಲು ಸ್ವಲ್ಪ ಗಟ್ಟಿ ಹಾಲು ತಾರಪ್ಪಾ.. 


ಬಾಗಿಲ ಚಿಲಕವಿಕ್ಕಿ, ಹಾಸಿಗೆ ತನಕ ಹೋದವಳ ತಲೆಗೆ ಬಂತು, ಅಯ್ಯೋ ಇವತ್ತು ನಾಷ್ಟಾಕ್ಕೆ ರವೆ ದೋಸೆ ಬೇಕೆಂದು ಹೇಳಿದ್ದರಲ್ಲವೇ ಮನೆಯವರು, ತಡಿ, ಒಂಚೂರು ರವೆ ಹದವಾಗಿ ಹುರಿದು ಮೊಸರು ಕಲಸಿಟ್ಟರೆ ಸಾಕು, ಅವರೆಲ್ಲ ಏಳುವ ಹೊತ್ತಿಗೆ ಹದ ಬಂದಿರುತ್ತೆ. 

ಹೋ,ಪಲ್ಯಕ್ಕೆ ಆಲೂಗಡ್ಡೆಯನ್ನೂ ಕುಕ್ಕರಿನಲ್ಲಿ ಬೇಯಿಸಿಬಿಡುವೆ, ಆಮೇಲೆ ಸಲೀಸಾದೀತು.. 

ಫೋನಿನಲ್ಲಿ ಬಂದ ವ್ಹೆದರ್ ಬ್ರಾಡ್- ಕಾಸ್ಟು, ಇವತ್ತು ಚುರು ಚುರು ಬಿಸಿಲು!! ಒಳ್ಳೇದಾಯಿತು, ಮೂರುವಾರದಿಂದ ಲಾಂಡ್ರಿಚೀಲದಲ್ಲಿ ಬಿದ್ದಿರುವ ಬೆಡ್ಶೀಟ್, ದಿಂಬಿನ ಕವರುಗಳನ್ನೆಲ್ಲ ಸೋಪಿನ ನೀರಲ್ಲಿ ನೆನೆಸಿ, ಮಲಗಿಬಿಡುವೆ,

ಮತ್ತೆ ಎದ್ದ ತಕ್ಷಣ ಮಷೀನಿಗೆ ಹಾಕಿಬಿಡಬಹುದು.


ಅಯ್ಯೋ ಗಂಟೆ ಏಳಾಯಿತೇ ಆಗಲೆ? ಇರಲಿ ಇನ್ನೊಂದು ತಾಸು 

ಬೆಚ್ಚಗೆ ರಗ್ಗಿನೊಳಗೆ ಸೇರಿ ಮಲಗುತ್ತೇನೆ..

ಅಯ್ಯೋ, ಇವತ್ತ್ಯಾಕೆ ಇಷ್ಟು ಬೇಗ ಬಂದೆ, ಇವತ್ತು ಸೂಟಿ!

'ವೈನಿ, ನಿಮಗ ಸೂಟಿ, ನನಗಿಲ್ಲ, ಸರೀರಿ ಬಡ ಬಡ ಕೆಲಸ ಮುಗಿಸಿ ಹೊಕ್ಕೀನಿ' ಕಲ್ಪನಾಳ ಒಕ್ಕೊರಲು..

ಅಯ್ಯೋ ಖರ್ಮವೇ, ಬಾ ಬಾ ಪಾತ್ರೆಯೆಲ್ಲ ಇನ್ನೂ ಎತ್ತಿಡಬೇಕು,

ಸ್ವಲ್ಪ ತಡಿ, ಈ ಮೂಲೆಯಲ್ಲೆಲ್ಲ ಕಟ್ಟಿರುವ ಜೇಡ ತೆಗೆದು ಕೊಡುತ್ತೇನೆ.. 



ಹಾ, ಕುಡಿಯುವ ನೀರೂ ಬಂದೇ ಬಿಟ್ಟಿತು,

ನೀರಿನ ಗುಂಡಿ, ಟಾಕಿಯನ್ನು ತಿಕ್ಕಿ ಸ್ವಚ್ಛ‌ಮಾಡಿ‌ ತುಂಬಿ, 

ಬಾಟಲಿ ಜಾರುಗಳನ್ನೆಲ್ಲ ತುಂಬಿಸಬೇಕಲ್ಲವೇ, ಅದೆಷ್ಟೊತ್ತು? ಅದನ್ನೂ ಮಾಡಿಯೇ ಬಿಡುವೆ.. 

ಅಷ್ಟರಲ್ಲಿ ಎದೆ ನಡುಗಿಸುವ ಧ್ವನಿ, ಮಮ್ಮೀssssss

ಅಪ್ಪಾ- ತಂದೆ ಮಗರಾssಯ ಎದ್ದೇಬಿಟ್ಟೆಯಾss

ಬಾ, ಇನ್ನೇನು ಮುಗಿಯಿತು ನನ್ನ ನಿದ್ದೆ!! 


No comments:

Post a Comment