Saturday 17 February 2024

ದಿಲ್-ಕಷಿ

 ದಿಲ್-ಕಷಿ


ನೀನಿಲ್ಲದ ಈ ಹೊತ್ತಿನಲ್ಲೂ, ನೀನಿಲ್ಲಿ ಇದ್ದಿದ್ದರೆಹಾ

ಗಿರುತ್ತಿತ್ತು, ಹೀಗಿರುತ್ತಿತ್ತು

ಅಂದುಕೊಳ್ಳುವುದರಲ್ಲಿ ಅದೆಷ್ಟು ಮಸ್ತಿ ಇದೆ ಗೊತ್ತಾ


ಮುಂದೊಂದು ದಿನ ಬಂದರೂ ಬರಬಹುದಾದ 

ನಿನ್ನೊಡನೆ ಕಳೆಯುವ ಆ ದಿನವ ಸುಖಾಸುಮ್ಮನೆ 

ಎದುರು ನೋಡುತ್ತಾ, ಏನೋ ಒಂದು ಉಮ್ಮೀದಿನಲ್ಲೇ 

ಕಳೆಯುತ್ತಿರುವ ಈ ಸಂಜೆ-ರಾತ್ರಿ-ಬೆಳಗುಗಳು 

ನನ್ನ ಕಡೆ ನೋಡಿ ಕಣ್ಣು ಮಿಟುಕಿಸುವ ರೀತಿ ನಿನಗೂ ಕಂಡಿಲ್ಲವಷ್ಟೇ!! 


ಗುಡ್ಡಗಾಡಿನ ಪುಟ್ಟ ಪಟ್ಟಣದ ಕಿರಿದಾದ ಬೀದಿಗಳಲ್ಲಿ .  ಛಳಿಗಾಲದ ಸಂಜೆ ಇಷ್ಟುದ್ದ ಉಣ್ಣೆಯ ಕೋಟು ತೊಟ್ಟ ನಾವಿಬ್ಬರೂ ಕೈ ಕೈ ಹಿಡಿದು ನಡೆಯುತ್ತಿರುವಾಗ , ನಿನ್ನ ಕೈ ಬಿಸಿಗೆ ಹಿತವಾಗಿ ನಡುಗುವ ನನ್ನ ಕುತ್ತಿಗೆಯ  ಸ್ಕಾರ್ಫ ಸರಿಸಿ ನವಿರಾದ ಮುತ್ತನಿಟ್ಟು, ಕಣ್ಣ ಸನ್ನೆಯಲ್ಲಿ ನೀ ಕಾವ್ಯ ಹೇಳುವುದು, ನಾ ನಾಚಿ ನೀರಾಗುವುದೆಲ್ಲ ಯಾವ ಜಶ್ನ-ಏ-ಬಹಾರ್ ಗೆ ಕಮ್ಮಿ ಹೇಳು?


ಹೂ ಮಾರುವ ಆ ಹುಡುಗನ ಹತ್ತಿರ ಅದೇನೋ ಗುಸುಗುಸು ಮಾಡಿ , ಕಣಿವೆಯ ಘಮ್ಮೆನ್ನುವ ಥರೇವಾರಿ ಹೂಗಳ ಗುಚ್ಛ ತಂದು ನನ್ನ ಎರಡೂ ಕೈಗಳ ಒತ್ತಿ ಹಿಡಿದು ನೀಡಿ,

ನೀನೇ ನನ್ನ ಜಾನ್ ಅನ್ನುತ್ತೀಯ,

 ಮತ್ತೆ  ರಸ್ತೆ ಬದಿಯ 

ಆ ತಿರುವಲ್ಲಿಯ ನಿನ್ನಿಷ್ಟದ ಪುಟ್ಟ ಕೆಫೆಯಲ್ಲಿ ಇಷ್ಟು ದೊಡ್ಡ ಬಟ್ಟಲಿನಲ್ಲಿ ಹಾಲಿಲ್ಲದ  ಕಹಿ  ಕಾಫಿಯ ಕೊಡಿಸಿ ನಾನು ಕುಡಿಯಲು ಪರದಾಡುವ ಫೋಟೋ ಕ್ಲಿಕ್ಕಿಸಿ ಗೊಳ್ಳೆಂದು ನಗುವ ನೀನು ಕ್ಯಾ ಚೀಜ್ ಹೈ ಅಂತನಿಸುವುದು ಸುಳ್ಳೇನಲ್ಲ


ಕೆಫೆಯ ಮೂಲೆಯ  ಟೇಬಲ್ಲಿನಲ್ಲಿ ಝಂಡಾ ಊರಿ 

ಅದೆಷ್ಟೋ ಸಮಯ ಕಳೆದರೂ ಮುಗಿಯದ ಮಾತುಗಳು,

ಕವಿತೆಗಳು!! 

ನೀ ತಂದಿರುವ ಈ ಗುಲ್ಜಾರ್ ಸಾಬರ ಹೊಸ ಪುಸ್ತಕದ ಕೊನೆಯ ಪುಟ ತಿರುವಲು ಇನ್ನು ಮಧ್ಯರಾತ್ರಿಯಾದರೂ ಆದೀತು, 

  ಇದ್ಯಾವ ಸೀಮೆ ಪ್ರೇಮಿಗಳಿವರು, ಪುಸ್ತಕ ಓದುವುದ ಬಿಟ್ಟು ಊಟಕ್ಕಿನ್ನೇನಾದರೂ ಆರ್ಡರ್ ಮಾಡಬಾರದೇ ಅಂದುಕೊಳ್ಳುತ್ತಿರಬಹುದಾದ ಕೆಫೆಯ ಪಕ್ಕಾ ವ್ಯವಹಾರಿ ಮಾಲಕನಿಗೆ 

ದಿಲ್-ಕಷಿ , ಜುನೂನ್ ಗಳಲ್ಲಿ ಕಳೆದುಹೋಗಿರುವ ನಾವು ಹುಚ್ಚರೆನಿಸಿದಿದ್ದರೆ ಸಾಕು!! 



No comments:

Post a Comment