Saturday, 17 February 2024

 ಸರಿರಾತ್ರಿಗಿನ್ನೇನು ಒಂದೇ ಗಂಟೆ

ಈಗಷ್ಟೇ ಕಣ್ತೆರೆಯುತ್ತದೆ ನನ್ನ ಲೋಕ

ವಾಟ್ಸಾಪಿನಲ್ಲಿ ಬಂದು ಬಿದ್ದಿರುವ ರಾಶಿ ಮೆಸೇಜುಗಳು

ಉತ್ತರಿಸುವ ಜರೂರಿ, 

ಫೇಸ್ ಬುಕ್‌ ಇನ್ಸ್ಟಾಗ್ರಾಂ ಗಳಲ್ಲೊಂದು ವಿಹಾರ,

ನೋಟ್ ಪ್ಯಾಡಿನಲ್ಲಿ ಮಾಡಿಟ್ಟ‌ ಚೆಕ್‌ ಲಿಸ್ಟ್ 

ಮೇಲೆ ಆತಂಕ, ತರಾತುರಿಯಲ್ಲಿ ಬೆರಳಾಡಿಸುತ್ತೇನೆ!


ನಾಳೆಗೆ ಮುಗಿಸಲೇಬೇಕಾದ ಆಫೀಸಿನ ಕೆಲಸಗಳು

ಮರೆತು ಹೋದ ಈ ಮೇಲ್ ಗಳಿಗೆ ಉತ್ತರ ತಲುಪಿಸುವುದು

ಓದದೇ ಪೆಂಡಿಗ್ ಲಿಸ್ಟ್ ನಲ್ಲಿಟ್ಟ ಲೇಖನಗಳು

ಶಾಪಿಂಗ್ ಬ್ಯಾಗ್ ನ ವಿಷ್ ಲಿಸ್ಟ್ ನಲ್ಲಿ ಕಾಯುತ್ತಿರುವ ಬಟ್ಟೆ ಬರೆ ಸರಂಜಾಮುಗಳನ್ನ ಕಾರ್ಟ ಮುಟ್ಟಿಸಿ ಮುಕ್ತಿಗೊಳಿಸುವುದು,

ಮೊನ್ನೆ  ಅಡುಗೆ ಮಾಡಿವಾಗ ಧುತ್ತೆಂದು ಎದೆಗೆ ಬಿದ್ದ ಭಾವಕ್ಕೆ ಅಕ್ಷರ ರೂಪ‌ಕೊಡುವುದು,

ನಾಳೆಗೆ ಮಾಡಬೇಕಾದ ಹೊಸ ಅಡುಗೆಯ ರೆಸಿಪಿಗೆ ಯುಟ್ಯೂಬ್  ನಲ್ಲಿ ತಡಕಾಡುವುದು,

ಮೂರುದಿನದಿಂದ ಕೊರೆಯುತ್ತೊರುವ, ಮನಸ್ಸಲ್ಲೇ ತಾನೇ ತಾನಾಗಿ ಸುತ್ತುತ್ತಿರುವ ವಿಷಯದ ಸುರುಳಿಯನ್ನು  ಹಾಗೇ

ಪೇಪರಿನ ಮೇಲಿಳಿಸುವುದು, 

ಉಫ್sss. ಅದಾ, ಇದಾ, ಯಾವುದು ಮಾಡುವುದು ಮೊದಲು?

ದ್ವಂದ್ವ ಹಾಗೇ ನಡೆಯುತ್ತಿರುವಂತೆ ಗಡಿಯಾರದಲ್ಲಿ ಹನ್ನೆರಡು.


ನಿಮ್ಮ ಡಾರ್ಕ ಸರ್ಕಲ್ ಕಡಿಮೆ ಮಾಡಲು, ಇದೋ DIY ಪ್ಯಾಕ್, ಯು ಟ್ಯೂಬಿನಿಂದ ಬಂದ ಸಲಹಾ ವಿಡಿಯೋ

 ಕ್ಲಿಕ್ಕಿಸಿ ನೋಡಿ ಅದನ್ನೂ ಸಂಡೇ ಚೆಕ್ ಲಿಸ್ಟಗೆ ಹಾಕುವಾಗ ನೆನಪಾಗುತ್ತದೆ,

 ಇನ್ನೂ ಆ ಪುಸ್ತಕ ಓದಲಿಕ್ಕೆದೆಯಲ್ಲವೇ, ಎದ್ದು‌ಹೋಗಿ ತರಲೇ? 

ಬೇಡ ದೀಪದ ಬೆಳಕಿಗೆ ಮಗರಾಯ ಎದ್ದರೇನು‌ ಮಾಡುವುದು?

ಹೋಗಲಿ ನೆಟ್ಫ್ಲಿಕ್ಸ ನಲ್ಲಿ ಪಟ್ಟಿ ಮಾಡಿಟ್ಟಿರುವ ಚಿತ್ರದ ಲಿಸ್ಟಿನ ಓಪನಿಂಗ್ ಸೆರೆಮೊನಿ ಮಾಡುವುದೋ? ಅಯ್ಯೋ ಬೇಡ ಬೇಡ

ಆಗಲೇ ಸರಹೊತ್ತು, ಇನ್ನು ಬೆಳಗ್ಗೆ ಬೇಗ ಎದ್ದು ಮತ್ತೊಂದು ದಿನಕ್ಕೆ‌ ಸಜ್ಜಾಗಬೇಕಲ್ಲ? 

ನಾಳೆ ಏನೇ ಆಗಲಿ, ಜಾಗಿಂಗ್ ಗೆ ಹೋಗಲೇಬೇಕು,

ಐದು ಗಂಟೆಗೆ ಅಲರಾಮ್ ಸೆಟ್ ಮಾಡಿ

ಸಿಡಿಯುತ್ತಿರುವ ತಲೆ ತುಂಬ ರಗ್ಗು ಹೊದ್ದು ಮಲಗುತ್ತೇನೆ

ಪುಟ್ಟ ಕೈ ತಡಕಾಡುತ್ತ ಹತ್ತಿರ ಬಂದು 

ಮಮ್ಮೀ, ಇದು ನಮ್ಮಮ್ಮೀ

ನನ್ ಕಡೆ ತಿರುಗೆಂಬ ಕನವರಿಕೆ

ಅಪ್ಪಿ ಹಿಡಿದ ನನಗೆ ನೆಮ್ಮದಿಯ ನಿದ್ದೆ.





 


No comments:

Post a Comment