Saturday, 17 February 2024

ಪ್ರೀತಿ-ಗೀತಿ

 ಬಲಮೆದುಳೇ ಬಲಶಾಲಿಯಾಗಿರುವ ಒಬ್ಬ

 ಹುಚ್ಚನಂತೆ ಪ್ರೇಮಿಸಬೇಕಿತ್ತು ನನ್ನ..

ಅಂದವನ್ನೆಲ್ಲ ಹೂವು, ನದಿ, ಬೆಟ್ಟ ಗಿಡ ಮರಗಳಿಗೆ ಹೋಲಿಸಿ 

ಪುಟಗಟ್ಟಲೇ ಕವಿತೆ ಗಿವಿತೆ ಗೀಚಿ ಹಾಕಬೇಕಿತ್ತು

ನನ್ನ ಒಳಹೊರಗು, ಸಿಟ್ಟು- ಮುಂಗೋಪ, ಬಾಲಿಶ, ಹುಚ್ಚುತನದ ಖಯಾಲಿಗಳನ್ನೆಲ್ಲ ಕವನ ಸಂಕಲನಗಳನ್ನಾಗಿಸಿ

ಹಾಡುಕಟ್ಟಿ ರಾಗ ಮಾಡಿ ಹಾಡಬೇಕಿತ್ತು


ನಾ ಓದುತ್ತಿರುವ ಪುಸ್ತಕ, ನೋಡುತ್ತಿರುವ ಸಿನೆಮಾ,ಕಥೆಯ ಸೂಕ್ಷ್ಮ,  ಕೇಳುತ್ತಿರುವ ರಾಗ-ಹಾಡು, ಹಾಡಿನ ಹಿಮ್ಮೇಳ, ಹಿಮ್ಮೇಳದಲ್ಲಿ ಬಳಸಿರುವ ಅದಾವುದೋ ಆದಿವಾಸಿಗಳ ಸಂಗೀತ ಉಪಕರಣ , ಹಾಡಿನ ಸಾಹಿತ್ಯದ ಓಘ.. ಹೀಗೆ ಎಲ್ಲ, ಎಲ್ಲವನ್ನೂ ತೀರ ಅಪ್ಯಾಯವಾಗಿ, ಸೊಗಸಾಗಿ ನನ್ನೊಡನೆ  ಚರ್ಚಿಸುವ ಹುಂಬನೊಬ್ಬ  ಮೋಹಿಸಬೇಕಿತ್ತು‌ ನನ್ನ.


ಹೀಗೆ ಸುಮ್ಮನೆ ಖಾಲಿ‌ ಸಂಜೆಗಳಲ್ಲಿ, ಟೇರೆಸಿನ ಮೇಲೆ ಕೈ- ಕೈ‌ಹಿಡಿದು ಕೂತು, ಬಾನು ಬದಲಿಸುತ್ತಿರುವ ಒಂದೊಂದು ರಂಗಿಗೂ ಒಂದೊಂದು ವ್ಯಾಖ್ಯಾನ ಕೊಟ್ಟು, ಸೂರ್ಯ ಅತ್ತಕಡೆ ಮುಳುಗುತ್ತಿದ್ದಂತೆಯೇ, ನನ್ನನ್ನೂ ತನ್ನ ಮುತ್ತಿನೊಳಗೆ ಮುಳುಗಿಸುವ ಖಾಸಾ ಅಲೆಮಾರಿಯೊಬ್ಬ ಪ್ರೇಮಿಸಬೇಕಿತ್ತು ನನ್ನ..

No comments:

Post a Comment