Saturday, 17 February 2024

 ಸರಿರಾತ್ರಿಗಿನ್ನೇನು ಒಂದೇ ಗಂಟೆ

ಈಗಷ್ಟೇ ಕಣ್ತೆರೆಯುತ್ತದೆ ನನ್ನ ಲೋಕ

ವಾಟ್ಸಾಪಿನಲ್ಲಿ ಬಂದು ಬಿದ್ದಿರುವ ರಾಶಿ ಮೆಸೇಜುಗಳು

ಉತ್ತರಿಸುವ ಜರೂರಿ, 

ಫೇಸ್ ಬುಕ್‌ ಇನ್ಸ್ಟಾಗ್ರಾಂ ಗಳಲ್ಲೊಂದು ವಿಹಾರ,

ನೋಟ್ ಪ್ಯಾಡಿನಲ್ಲಿ ಮಾಡಿಟ್ಟ‌ ಚೆಕ್‌ ಲಿಸ್ಟ್ 

ಮೇಲೆ ಆತಂಕ, ತರಾತುರಿಯಲ್ಲಿ ಬೆರಳಾಡಿಸುತ್ತೇನೆ!


ನಾಳೆಗೆ ಮುಗಿಸಲೇಬೇಕಾದ ಆಫೀಸಿನ ಕೆಲಸಗಳು

ಮರೆತು ಹೋದ ಈ ಮೇಲ್ ಗಳಿಗೆ ಉತ್ತರ ತಲುಪಿಸುವುದು

ಓದದೇ ಪೆಂಡಿಗ್ ಲಿಸ್ಟ್ ನಲ್ಲಿಟ್ಟ ಲೇಖನಗಳು

ಶಾಪಿಂಗ್ ಬ್ಯಾಗ್ ನ ವಿಷ್ ಲಿಸ್ಟ್ ನಲ್ಲಿ ಕಾಯುತ್ತಿರುವ ಬಟ್ಟೆ ಬರೆ ಸರಂಜಾಮುಗಳನ್ನ ಕಾರ್ಟ ಮುಟ್ಟಿಸಿ ಮುಕ್ತಿಗೊಳಿಸುವುದು,

ಮೊನ್ನೆ  ಅಡುಗೆ ಮಾಡಿವಾಗ ಧುತ್ತೆಂದು ಎದೆಗೆ ಬಿದ್ದ ಭಾವಕ್ಕೆ ಅಕ್ಷರ ರೂಪ‌ಕೊಡುವುದು,

ನಾಳೆಗೆ ಮಾಡಬೇಕಾದ ಹೊಸ ಅಡುಗೆಯ ರೆಸಿಪಿಗೆ ಯುಟ್ಯೂಬ್  ನಲ್ಲಿ ತಡಕಾಡುವುದು,

ಮೂರುದಿನದಿಂದ ಕೊರೆಯುತ್ತೊರುವ, ಮನಸ್ಸಲ್ಲೇ ತಾನೇ ತಾನಾಗಿ ಸುತ್ತುತ್ತಿರುವ ವಿಷಯದ ಸುರುಳಿಯನ್ನು  ಹಾಗೇ

ಪೇಪರಿನ ಮೇಲಿಳಿಸುವುದು, 

ಉಫ್sss. ಅದಾ, ಇದಾ, ಯಾವುದು ಮಾಡುವುದು ಮೊದಲು?

ದ್ವಂದ್ವ ಹಾಗೇ ನಡೆಯುತ್ತಿರುವಂತೆ ಗಡಿಯಾರದಲ್ಲಿ ಹನ್ನೆರಡು.


ನಿಮ್ಮ ಡಾರ್ಕ ಸರ್ಕಲ್ ಕಡಿಮೆ ಮಾಡಲು, ಇದೋ DIY ಪ್ಯಾಕ್, ಯು ಟ್ಯೂಬಿನಿಂದ ಬಂದ ಸಲಹಾ ವಿಡಿಯೋ

 ಕ್ಲಿಕ್ಕಿಸಿ ನೋಡಿ ಅದನ್ನೂ ಸಂಡೇ ಚೆಕ್ ಲಿಸ್ಟಗೆ ಹಾಕುವಾಗ ನೆನಪಾಗುತ್ತದೆ,

 ಇನ್ನೂ ಆ ಪುಸ್ತಕ ಓದಲಿಕ್ಕೆದೆಯಲ್ಲವೇ, ಎದ್ದು‌ಹೋಗಿ ತರಲೇ? 

ಬೇಡ ದೀಪದ ಬೆಳಕಿಗೆ ಮಗರಾಯ ಎದ್ದರೇನು‌ ಮಾಡುವುದು?

ಹೋಗಲಿ ನೆಟ್ಫ್ಲಿಕ್ಸ ನಲ್ಲಿ ಪಟ್ಟಿ ಮಾಡಿಟ್ಟಿರುವ ಚಿತ್ರದ ಲಿಸ್ಟಿನ ಓಪನಿಂಗ್ ಸೆರೆಮೊನಿ ಮಾಡುವುದೋ? ಅಯ್ಯೋ ಬೇಡ ಬೇಡ

ಆಗಲೇ ಸರಹೊತ್ತು, ಇನ್ನು ಬೆಳಗ್ಗೆ ಬೇಗ ಎದ್ದು ಮತ್ತೊಂದು ದಿನಕ್ಕೆ‌ ಸಜ್ಜಾಗಬೇಕಲ್ಲ? 

ನಾಳೆ ಏನೇ ಆಗಲಿ, ಜಾಗಿಂಗ್ ಗೆ ಹೋಗಲೇಬೇಕು,

ಐದು ಗಂಟೆಗೆ ಅಲರಾಮ್ ಸೆಟ್ ಮಾಡಿ

ಸಿಡಿಯುತ್ತಿರುವ ತಲೆ ತುಂಬ ರಗ್ಗು ಹೊದ್ದು ಮಲಗುತ್ತೇನೆ

ಪುಟ್ಟ ಕೈ ತಡಕಾಡುತ್ತ ಹತ್ತಿರ ಬಂದು 

ಮಮ್ಮೀ, ಇದು ನಮ್ಮಮ್ಮೀ

ನನ್ ಕಡೆ ತಿರುಗೆಂಬ ಕನವರಿಕೆ

ಅಪ್ಪಿ ಹಿಡಿದ ನನಗೆ ನೆಮ್ಮದಿಯ ನಿದ್ದೆ.





 


ಸತ್ಯವನ್ನೇ ಹೇಳುತ್ತೇನೆ

 ಸತ್ಯವನ್ನೇ ಹೇಳುತ್ತೇನೆ, ಸತ್ಯವನ್ನಲ್ಲದೇ ಬೇರೇನನ್ನೂ ಹೇಳುವುದಿಲ್ಲ,

ಅಂದುಕೊಳ್ಳುತ್ತಲೇ

ನೆನಪಾಗುತ್ತದೆ ಸತ್ಯ ತುಂಬಾ ಕಹಿ ಎಂದು

ಅಷ್ಟಕ್ಕೂ ಸತ್ಯವನ್ನು  ಕೇಳಿ, 

ಅದು ಇದ್ದಂತೇ ಸ್ವೀಕರಿಸುವರು ಯಾರಿದ್ದಾರೆ ಇಲ್ಲಿ

ಇರುವುದೆಲ್ಲವ ಬಿಟ್ಟು, ಇರದುದರೆಡೆಗೆ ಜೀವ ತುಡಿಯುತ್ತದೆ ಎಂದರೆ ಒಪ್ಪಿಗೆಯೇ?? 

ಒಪ್ಪವಾಗಿ ಸಂಸಾರ ಮಾಡುತ್ತಿರುವಾಗ 

ಹೀಗೆ ಎಲ್ಲವನ್ನು ಬಿಟ್ಟು ನಡೆಯುವ ಆಸೆಯ

ಎದೆಯಲ್ಲಿ ಕಾಪಿಡುವ ಸತ್ಯ  ಸಮ್ಮತವೇ?


ಸೀತೆ ಸಾವಿತ್ರಿಯರಿಗೆ ಉಧೋ ಉಧೋ ಎನ್ನುವ ನಿಮ್ಮ ಮುಂದೆ

ಅಮೃತಮತಿಯ ತುಮುಲ-ದುಗುಡಗಳ ಸತ್ಯಕತೆ ಹೇಳಬೇಕು,

ಮಮ್ಮಲ ಮರುಗುವ ಛಾತಿ ಇದೆಯೇ?


ಬಿಳಿಯೇ ಪರಮಶ್ರೇಷ್ಠ ಪರಿಶುದ್ಧ ಅಂದುಕೊಳ್ಳುವ ನಿಮಗೆ

ಕಪ್ಪಷ್ಟೇ ಅಲ್ಲ, ಹಲುವು  ರಂಗಿನ ಕನಸುಗಳ ಸತ್ಯ , ಹುಚ್ವುಚ್ಚು ಅನಿಸದಿದ್ದರಷ್ಟೇ  ಸಾಕು 

ನೀವೆಲ್ಲ ಪಾದ-ಪೂಜೆಗೆ ಅಣಿಯಾಗಿರುವ ಈ‌ ಹೊತ್ತು

ನಾ ಬಂಡಾಯದ ಹಾಡು ಹೆಣೆಯುತ್ತಿರುವ ಸತ್ಯ ಪಥ್ಯವೇ?


ಈ ಬದುಕು ನನ್ನದಷ್ಟೇ ಮತ್ತು ಬೇಕಿರುವುದು ಹಿಡಿ ಪ್ರೀತಿ

ಆದರೆ 'ಹಿಡಿ ಪ್ರೀತಿ' ಅಷ್ಟೇ ಅಲ್ಲ ಎನ್ನುವ ಕಟುಸತ್ಯಕ್ಕೆ 

ತೋರುವ  ಜಾಣಕುರುಡು ಇಲ್ಲಿ ಜಗಜ್ಜಾಹೀರು,

ಒಳ್ಳೇತನದ ಹಣೆಪಟ್ಟಿಯ ಕಿತ್ತಸೆಯುವುದು ಎಳ್ಳಷ್ಟೂ ಕಷ್ಟವಲ್ಲ

ಎನ್ನುವ ಸತ್ಯ ಉವಾಚ ಹೇಳುವುದೊಂದಿದೆ

ದಕ್ಕಿಸಿಕೊಳ್ಳುವ ತಾರ್ಕಿಕತೆ ಇದೆಯೇ?


 ನಿಮ್ಮ ಎದೆಗೋಡೆಗಳಿಗೆ ಅಂಟಿಸಿಕೊಂಡಿರುವ ಅಹಮಿಕೆಯ ಬಗ್ಗೆ ದುಃಖ-ಬೇಜಾರುಗಳಿಲ್ಲ, ಇರುವುದು ಕೇವಲ ಕರುಣೆ ಎಂಬ ಸತ್ಯ ಕೂಗಿ ಕೂಗಿ ಹೇಳಬೇಕಿದೆ, ಕಿವಿಗೊಡುವಿರಾದರೆ!!

ಬದುಕು ರೈಲುಹಳಿಗಳಂತೆ, ಎಂದೂ ಒಂದನ್ನೊಂದು ಸೇರವು

ಹೋದರೆ ಹೋಗಲಿ ಬಿಡಿ, ಹಳಿ ತಪ್ಪಿದರೇನಂತೆ

ಅಂದುಕೊಳ್ಳುವುದು ಅದೆಷ್ಟು ಘೋರಸತ್ಯ!! 

ನಿಮ್ಮ ಕಿವಿಗಿದು ರುಚಿಸುವುದೇ? 



ಹೀಗೊಂದು ರವಿವಾರ

 ಹೀಗೊಂದು ರವಿವಾರ


ನಾಳೆ ರಜೆಯಲ್ಲವೇ, ಇದೊಂದು ಕೆಲಸ ಈ‌ರಾತ್ರಿಯೇ ಮುಗಿಸಿಬಿಡುವೆ, ಬೆಳಗ್ಗೆ ಆರಾಮಾಗಿ, ಲೇಟಾಗಿ ಎದ್ದರಾಯಿತು ಇನ್ನೇನು ಹನ್ನೆರಡಾಗುತ್ತಾ ಬಂತು..


ಥೋ, ಈ ಹಾಲಿನವನೊಬ್ಬ ಆರುಗಂಟೆಗೆಲ್ಲ ಬಂದು ಬಾಗಿಲು ತಟ್ಟುತ್ತಾನೆ, ಹಾss ಬಂದೆ ಬಂದೆ ತಡಿಯಪ್ಪಾ, ಹಾಲು ಮತ್ತೆ ನೀರೋ ನೀರು, ಸಣ್ಣಕೂಸಿಗೆ ಕುಡಿಸುವ ಹಾಲು ಸ್ವಲ್ಪ ಗಟ್ಟಿ ಹಾಲು ತಾರಪ್ಪಾ.. 


ಬಾಗಿಲ ಚಿಲಕವಿಕ್ಕಿ, ಹಾಸಿಗೆ ತನಕ ಹೋದವಳ ತಲೆಗೆ ಬಂತು, ಅಯ್ಯೋ ಇವತ್ತು ನಾಷ್ಟಾಕ್ಕೆ ರವೆ ದೋಸೆ ಬೇಕೆಂದು ಹೇಳಿದ್ದರಲ್ಲವೇ ಮನೆಯವರು, ತಡಿ, ಒಂಚೂರು ರವೆ ಹದವಾಗಿ ಹುರಿದು ಮೊಸರು ಕಲಸಿಟ್ಟರೆ ಸಾಕು, ಅವರೆಲ್ಲ ಏಳುವ ಹೊತ್ತಿಗೆ ಹದ ಬಂದಿರುತ್ತೆ. 

ಹೋ,ಪಲ್ಯಕ್ಕೆ ಆಲೂಗಡ್ಡೆಯನ್ನೂ ಕುಕ್ಕರಿನಲ್ಲಿ ಬೇಯಿಸಿಬಿಡುವೆ, ಆಮೇಲೆ ಸಲೀಸಾದೀತು.. 

ಫೋನಿನಲ್ಲಿ ಬಂದ ವ್ಹೆದರ್ ಬ್ರಾಡ್- ಕಾಸ್ಟು, ಇವತ್ತು ಚುರು ಚುರು ಬಿಸಿಲು!! ಒಳ್ಳೇದಾಯಿತು, ಮೂರುವಾರದಿಂದ ಲಾಂಡ್ರಿಚೀಲದಲ್ಲಿ ಬಿದ್ದಿರುವ ಬೆಡ್ಶೀಟ್, ದಿಂಬಿನ ಕವರುಗಳನ್ನೆಲ್ಲ ಸೋಪಿನ ನೀರಲ್ಲಿ ನೆನೆಸಿ, ಮಲಗಿಬಿಡುವೆ,

ಮತ್ತೆ ಎದ್ದ ತಕ್ಷಣ ಮಷೀನಿಗೆ ಹಾಕಿಬಿಡಬಹುದು.


ಅಯ್ಯೋ ಗಂಟೆ ಏಳಾಯಿತೇ ಆಗಲೆ? ಇರಲಿ ಇನ್ನೊಂದು ತಾಸು 

ಬೆಚ್ಚಗೆ ರಗ್ಗಿನೊಳಗೆ ಸೇರಿ ಮಲಗುತ್ತೇನೆ..

ಅಯ್ಯೋ, ಇವತ್ತ್ಯಾಕೆ ಇಷ್ಟು ಬೇಗ ಬಂದೆ, ಇವತ್ತು ಸೂಟಿ!

'ವೈನಿ, ನಿಮಗ ಸೂಟಿ, ನನಗಿಲ್ಲ, ಸರೀರಿ ಬಡ ಬಡ ಕೆಲಸ ಮುಗಿಸಿ ಹೊಕ್ಕೀನಿ' ಕಲ್ಪನಾಳ ಒಕ್ಕೊರಲು..

ಅಯ್ಯೋ ಖರ್ಮವೇ, ಬಾ ಬಾ ಪಾತ್ರೆಯೆಲ್ಲ ಇನ್ನೂ ಎತ್ತಿಡಬೇಕು,

ಸ್ವಲ್ಪ ತಡಿ, ಈ ಮೂಲೆಯಲ್ಲೆಲ್ಲ ಕಟ್ಟಿರುವ ಜೇಡ ತೆಗೆದು ಕೊಡುತ್ತೇನೆ.. 



ಹಾ, ಕುಡಿಯುವ ನೀರೂ ಬಂದೇ ಬಿಟ್ಟಿತು,

ನೀರಿನ ಗುಂಡಿ, ಟಾಕಿಯನ್ನು ತಿಕ್ಕಿ ಸ್ವಚ್ಛ‌ಮಾಡಿ‌ ತುಂಬಿ, 

ಬಾಟಲಿ ಜಾರುಗಳನ್ನೆಲ್ಲ ತುಂಬಿಸಬೇಕಲ್ಲವೇ, ಅದೆಷ್ಟೊತ್ತು? ಅದನ್ನೂ ಮಾಡಿಯೇ ಬಿಡುವೆ.. 

ಅಷ್ಟರಲ್ಲಿ ಎದೆ ನಡುಗಿಸುವ ಧ್ವನಿ, ಮಮ್ಮೀssssss

ಅಪ್ಪಾ- ತಂದೆ ಮಗರಾssಯ ಎದ್ದೇಬಿಟ್ಟೆಯಾss

ಬಾ, ಇನ್ನೇನು ಮುಗಿಯಿತು ನನ್ನ ನಿದ್ದೆ!! 


ಪ್ರೀತಿ-ಗೀತಿ

 ಬಲಮೆದುಳೇ ಬಲಶಾಲಿಯಾಗಿರುವ ಒಬ್ಬ

 ಹುಚ್ಚನಂತೆ ಪ್ರೇಮಿಸಬೇಕಿತ್ತು ನನ್ನ..

ಅಂದವನ್ನೆಲ್ಲ ಹೂವು, ನದಿ, ಬೆಟ್ಟ ಗಿಡ ಮರಗಳಿಗೆ ಹೋಲಿಸಿ 

ಪುಟಗಟ್ಟಲೇ ಕವಿತೆ ಗಿವಿತೆ ಗೀಚಿ ಹಾಕಬೇಕಿತ್ತು

ನನ್ನ ಒಳಹೊರಗು, ಸಿಟ್ಟು- ಮುಂಗೋಪ, ಬಾಲಿಶ, ಹುಚ್ಚುತನದ ಖಯಾಲಿಗಳನ್ನೆಲ್ಲ ಕವನ ಸಂಕಲನಗಳನ್ನಾಗಿಸಿ

ಹಾಡುಕಟ್ಟಿ ರಾಗ ಮಾಡಿ ಹಾಡಬೇಕಿತ್ತು


ನಾ ಓದುತ್ತಿರುವ ಪುಸ್ತಕ, ನೋಡುತ್ತಿರುವ ಸಿನೆಮಾ,ಕಥೆಯ ಸೂಕ್ಷ್ಮ,  ಕೇಳುತ್ತಿರುವ ರಾಗ-ಹಾಡು, ಹಾಡಿನ ಹಿಮ್ಮೇಳ, ಹಿಮ್ಮೇಳದಲ್ಲಿ ಬಳಸಿರುವ ಅದಾವುದೋ ಆದಿವಾಸಿಗಳ ಸಂಗೀತ ಉಪಕರಣ , ಹಾಡಿನ ಸಾಹಿತ್ಯದ ಓಘ.. ಹೀಗೆ ಎಲ್ಲ, ಎಲ್ಲವನ್ನೂ ತೀರ ಅಪ್ಯಾಯವಾಗಿ, ಸೊಗಸಾಗಿ ನನ್ನೊಡನೆ  ಚರ್ಚಿಸುವ ಹುಂಬನೊಬ್ಬ  ಮೋಹಿಸಬೇಕಿತ್ತು‌ ನನ್ನ.


ಹೀಗೆ ಸುಮ್ಮನೆ ಖಾಲಿ‌ ಸಂಜೆಗಳಲ್ಲಿ, ಟೇರೆಸಿನ ಮೇಲೆ ಕೈ- ಕೈ‌ಹಿಡಿದು ಕೂತು, ಬಾನು ಬದಲಿಸುತ್ತಿರುವ ಒಂದೊಂದು ರಂಗಿಗೂ ಒಂದೊಂದು ವ್ಯಾಖ್ಯಾನ ಕೊಟ್ಟು, ಸೂರ್ಯ ಅತ್ತಕಡೆ ಮುಳುಗುತ್ತಿದ್ದಂತೆಯೇ, ನನ್ನನ್ನೂ ತನ್ನ ಮುತ್ತಿನೊಳಗೆ ಮುಳುಗಿಸುವ ಖಾಸಾ ಅಲೆಮಾರಿಯೊಬ್ಬ ಪ್ರೇಮಿಸಬೇಕಿತ್ತು ನನ್ನ..

 ಚುಮು ಚುಮು ಮಂಜಾವಿನಲ್ಲಿ, ನೆತ್ತಿ ಸವರಿ, ಮುದ್ದುಮಾಡಿ ನಿನ್ನನೆಬ್ಬಿಸುವೆ, ಬ್ರಷ್ ಗೆ ಪೇಸ್ಟು, ಮುಖ ತೊಳೆಯಲೊಂದಿಷ್ಟು ಹಿತವಾದ ಬಿಸಿನೀರು.. ಬಿಸಿ ಬಿಸಿ ಕಾಫಿಯೊಡನೆ ಇಕೋ ಬಿಸಿ ಸುದ್ದಿ ಹೊತ್ತು ತಂದ ನ್ಯೂಸ್ ಪೇಪರ್ರು, ಸುದ್ದಿ ಇಷ್ಟ ಆಗಲಿಲ್ಲವೇ, ನಾ ಪುಟ ತಿರುವುವೆ..


ಮತ್ತೆ ನಿನ್ನ ಆಫೀಸಿಗೆ ಟೈಮಾಯಿತು, ಏಳು ಬೆನ್ನುಜ್ಜಿ ಸ್ನಾನ ಮಾಡಿಸಿ ಒಂದಷ್ಟು ಘಮ ಘಮ ಸೆಂಟು ಪೂಸುವೆ.. ಇಂದು ಸೋಮವಾರವಲ್ಲವೇ ತಗೋ ನಿನ್ನ ನೆಚ್ಚಿನ ,ಶುಭ್ರವಾಗಿ ಒಗೆದು ಗರಿಗರಿ ಇಸ್ತ್ರಿ ಹಾಕಿದ ಬಿಳಿ ಶರ್ಟು ಜೊತೆಗೆ ಬಿಳಿ ಕರ್ಚೀಫು..


ಮಲ್ಲಿಗೆ ಹೂವಿನಂಥ ಇಡ್ಲಿಗೆ, ಹದವಾಗಿ ಮಸಾಲೆ ಬೆರೆಸಿದ ಸಾಂಬಾರು, ಮೇಲೊಂದಿಷ್ಟು ಗಟ್ಟಿ ಚಟ್ನಿ, ಬಾಯಿ ಚಪ್ಪರಿಸುತ್ತಾ ತಿಂದು ಬಿಡು,

ಗಂಟೆ ಎಂಟಾಗೇ ಹೋಯಿತು, ಇಕೋ ನಿನ್ನ ಲ್ಯಾಪ್-ಟಾಪ್ ಬ್ಯಾಗು, ವಾಚು, ರೆಡಿ, ಮತ್ತೆ ಈ ಫೈಲು ಎತ್ತಿಕೊ, ಕಾರಿನ ಕೀಯಂತೂ ಇಲ್ಲೇ ಇದೆ, 

ಹಣೆಗೊಂದು ಹೂ ಮುತ್ತನಿಟ್ಟು ನಡೆದೇ ಬಿಡು.. :-)

ದಿಲ್-ಕಷಿ

 ದಿಲ್-ಕಷಿ


ನೀನಿಲ್ಲದ ಈ ಹೊತ್ತಿನಲ್ಲೂ, ನೀನಿಲ್ಲಿ ಇದ್ದಿದ್ದರೆಹಾ

ಗಿರುತ್ತಿತ್ತು, ಹೀಗಿರುತ್ತಿತ್ತು

ಅಂದುಕೊಳ್ಳುವುದರಲ್ಲಿ ಅದೆಷ್ಟು ಮಸ್ತಿ ಇದೆ ಗೊತ್ತಾ


ಮುಂದೊಂದು ದಿನ ಬಂದರೂ ಬರಬಹುದಾದ 

ನಿನ್ನೊಡನೆ ಕಳೆಯುವ ಆ ದಿನವ ಸುಖಾಸುಮ್ಮನೆ 

ಎದುರು ನೋಡುತ್ತಾ, ಏನೋ ಒಂದು ಉಮ್ಮೀದಿನಲ್ಲೇ 

ಕಳೆಯುತ್ತಿರುವ ಈ ಸಂಜೆ-ರಾತ್ರಿ-ಬೆಳಗುಗಳು 

ನನ್ನ ಕಡೆ ನೋಡಿ ಕಣ್ಣು ಮಿಟುಕಿಸುವ ರೀತಿ ನಿನಗೂ ಕಂಡಿಲ್ಲವಷ್ಟೇ!! 


ಗುಡ್ಡಗಾಡಿನ ಪುಟ್ಟ ಪಟ್ಟಣದ ಕಿರಿದಾದ ಬೀದಿಗಳಲ್ಲಿ .  ಛಳಿಗಾಲದ ಸಂಜೆ ಇಷ್ಟುದ್ದ ಉಣ್ಣೆಯ ಕೋಟು ತೊಟ್ಟ ನಾವಿಬ್ಬರೂ ಕೈ ಕೈ ಹಿಡಿದು ನಡೆಯುತ್ತಿರುವಾಗ , ನಿನ್ನ ಕೈ ಬಿಸಿಗೆ ಹಿತವಾಗಿ ನಡುಗುವ ನನ್ನ ಕುತ್ತಿಗೆಯ  ಸ್ಕಾರ್ಫ ಸರಿಸಿ ನವಿರಾದ ಮುತ್ತನಿಟ್ಟು, ಕಣ್ಣ ಸನ್ನೆಯಲ್ಲಿ ನೀ ಕಾವ್ಯ ಹೇಳುವುದು, ನಾ ನಾಚಿ ನೀರಾಗುವುದೆಲ್ಲ ಯಾವ ಜಶ್ನ-ಏ-ಬಹಾರ್ ಗೆ ಕಮ್ಮಿ ಹೇಳು?


ಹೂ ಮಾರುವ ಆ ಹುಡುಗನ ಹತ್ತಿರ ಅದೇನೋ ಗುಸುಗುಸು ಮಾಡಿ , ಕಣಿವೆಯ ಘಮ್ಮೆನ್ನುವ ಥರೇವಾರಿ ಹೂಗಳ ಗುಚ್ಛ ತಂದು ನನ್ನ ಎರಡೂ ಕೈಗಳ ಒತ್ತಿ ಹಿಡಿದು ನೀಡಿ,

ನೀನೇ ನನ್ನ ಜಾನ್ ಅನ್ನುತ್ತೀಯ,

 ಮತ್ತೆ  ರಸ್ತೆ ಬದಿಯ 

ಆ ತಿರುವಲ್ಲಿಯ ನಿನ್ನಿಷ್ಟದ ಪುಟ್ಟ ಕೆಫೆಯಲ್ಲಿ ಇಷ್ಟು ದೊಡ್ಡ ಬಟ್ಟಲಿನಲ್ಲಿ ಹಾಲಿಲ್ಲದ  ಕಹಿ  ಕಾಫಿಯ ಕೊಡಿಸಿ ನಾನು ಕುಡಿಯಲು ಪರದಾಡುವ ಫೋಟೋ ಕ್ಲಿಕ್ಕಿಸಿ ಗೊಳ್ಳೆಂದು ನಗುವ ನೀನು ಕ್ಯಾ ಚೀಜ್ ಹೈ ಅಂತನಿಸುವುದು ಸುಳ್ಳೇನಲ್ಲ


ಕೆಫೆಯ ಮೂಲೆಯ  ಟೇಬಲ್ಲಿನಲ್ಲಿ ಝಂಡಾ ಊರಿ 

ಅದೆಷ್ಟೋ ಸಮಯ ಕಳೆದರೂ ಮುಗಿಯದ ಮಾತುಗಳು,

ಕವಿತೆಗಳು!! 

ನೀ ತಂದಿರುವ ಈ ಗುಲ್ಜಾರ್ ಸಾಬರ ಹೊಸ ಪುಸ್ತಕದ ಕೊನೆಯ ಪುಟ ತಿರುವಲು ಇನ್ನು ಮಧ್ಯರಾತ್ರಿಯಾದರೂ ಆದೀತು, 

  ಇದ್ಯಾವ ಸೀಮೆ ಪ್ರೇಮಿಗಳಿವರು, ಪುಸ್ತಕ ಓದುವುದ ಬಿಟ್ಟು ಊಟಕ್ಕಿನ್ನೇನಾದರೂ ಆರ್ಡರ್ ಮಾಡಬಾರದೇ ಅಂದುಕೊಳ್ಳುತ್ತಿರಬಹುದಾದ ಕೆಫೆಯ ಪಕ್ಕಾ ವ್ಯವಹಾರಿ ಮಾಲಕನಿಗೆ 

ದಿಲ್-ಕಷಿ , ಜುನೂನ್ ಗಳಲ್ಲಿ ಕಳೆದುಹೋಗಿರುವ ನಾವು ಹುಚ್ಚರೆನಿಸಿದಿದ್ದರೆ ಸಾಕು!! 





ಅಕ್ಷಯ ಪಾತ್ರೆ
ನನ್ನ ಪ್ರೀತಿಜೋಳಿಗೆ
ನಾ ಚಿರವಿರಹಿಣಿ

ಇಡೀ ಜಗವ ಮರೆಸುವ ತಾಕತ್ತು
ನಿನಗೂ ಇರದ ನಿನ್ನ
ನೆನಪಿಗೆ..




ಮಸಿ ಅರಿವೆಯ ಸ್ವಗತ



ಮಸಿ ಅರಿವೆಯ ಸ್ವಗತ

ಹಾ, ಎಷ್ಟು ಚಂದ ಇದ್ದೆ ನಾನು
ಮನೆ ಒಡತಿ ತನ್ನ ಹೂಮೈಗೆ
ನನ್ನ ಸುತ್ತಿಕೊಂಡು ಕನ್ನಡಿಯೆದರು
ನಿಂತಾಗ ನಾನೆಷ್ಟು ಬೀಗುತ್ತಿದ್ದೆ
ಗತ್ತಿನಿಂದ ಸೆರಗಾಗಿ ಹಾರುತ್ತಿದ್ದೆ.

ಶುದ್ಧ ಹಾಲಿನ ಬಣ್ಣದೊಳಗೆ ಹೂಬಳ್ಳಿ
ಎಲೆಗಳ ಚಿತ್ತಾರ
ದಂಡೆಗೊಂದಿಷ್ಟು ನಾಜೂಕಾದ  ಜರಿ ಅಂಚು
ಮುಟ್ಟಿದರೆ ಹಾಯ್ ಎನಿಸುವಷ್ಟು ನವಿರು(ಮೃದು)
ಶುದ್ಧ ಹತ್ತಿಯಿಂದ ಕೈಯಲ್ಲೇ ನೇಯ್ದದ್ದಂತೆ
ನೋಡಿ ಅಲ್ಲಿ ಆಕೆ ಉಟ್ಟ ಸೀರೆ!
ಆಗಂತೂ ಹೇಗೆ ಹೆಮ್ಮೆಯಿಂದ ಉಬ್ಬಿ 
ಹೆಜ್ಜೆ ಹೆಜ್ಜೆಗೂ ನೆರಿಗೆಯಾಗಿ ಪುಟಿದಿದ್ದೆ

ಭವ್ಯ ಬಂಗಲೆಗಳು, ದೊಡ್ಡ ಮಹಲುಗಳು
ಜಾತಣಕೂಟ, ಸಂಗೀತ ಕಛೇರಿ,ನಾಟಕಗಳು
ಹೋದಲ್ಲೆಲ್ಲಾ ಮೆಚ್ಚುಗೆ ಗಳಿಸಿ, ಒಡತಿಯ
ಅಂದ ಇಮ್ಮಡಿಗೊಳಿಸಿ ಮಿಂಚುತ್ತಿದ್ದೆ
ಮತ್ತೆ ವಾಷಿಂಗ್ ಮಷೀನಿನ ಘಮಗುಡುವ
ಸಾಬೂನಿನ ಸ್ನಾನ ಮತ್ತೆ ಗಂಜಿ ಹಾಕಿದ ಗರಿಗರಿ ಇಸ್ತ್ರಿ

ಈಗೀಗ ಕನ್ನಡಿ ಕಾಣುವುದೇ ಇಲ್ಲ
ಒಂದೊಂದು ಸಲ ಆಕಸ್ಮಾತಾಗಿ ಎದುರಾಗುವ
ಪಾತ್ರೆ, ತಟ್ಟೆಗಳಲ್ಲಿ ಹೀಗೊಂದಿಷ್ಟು ಮುಖದರ್ಶನ
ಅರೆ...?? ಇದು ನಾನೇನಾ?
ಹೀಗೇಕೆ ಕಪ್ಪು ಸುರುವಿದ್ದಾರೆ ನನ್ನ ಮೇಲೆ
ಮತ್ತೆ ಅಲ್ಲೊಂದು ಇಲ್ಲೊಂದು ತೂತು
ನಾನು ಹೂವಿನ ಚಿತ್ತಾರದ ಸೆರಗೋ?
ಜರಿಯಂಚಿನ ದಂಡೆಯೋ? ಇಲ್ಲಾ
ಪುಟಿಯುತ್ತಿದ್ದ  ನೆರಿಗೆಯೋ..?
ಊಹುಂ! ನನ್ನ ಅಸ್ತಿತ್ವವೇ ಹೊಳೆಯುತ್ತಿಲ್ಲ

ನನ್ನಡೊತಿಗೆ, ನನ್ನ ಕಂಡರೆ ದಿವ್ಯ ನಿರ್ಲಕ್ಷ್ಯ
ಒಮ್ಮೊಮ್ಮೆ ನೆಲಗುಡಿಸುವ ಅರಿವೆಯಾದರೆ
ಇನ್ನೊಮ್ಮೆ, ಡಬ್ಬಿಗಳ ಪೇರಿಸಿಟ್ಟ ಮಾಡಿನ
ಧೂಳು ಕೊಡೆಯುವ ಕಾರ್ಯ
ಬಿಸಿ ಹಾಲಿನ ಪಾತ್ರೆ ಮುಟ್ಟುವಾಗಂತೂ
ಮೈಯೆಲ್ಲಾ ನಡುಕ
ಸೋಪಿನ ಬುರುಗೇಳುವ ನೀರಿನಲ್ಲಿ ಮಿಂದು
ಅದೆಷ್ಟು ದಿನವಾಯಿತೋ??
ಅಭ್ಯಾಸವಾಗಿದೆ ವಾರಕೊಮ್ಮೆ ಕೆಲಸದ ಕಲ್ಪನಾ
ಮಾಡಿಸುವ ಒಣ ಒಣ ಸ್ನಾನ

ಇನ್ನೇನಿದ್ದರೂ, ಇನ್ನೊಂದಿಷ್ಟು ಮಸಿ, ದೂಳು
ಹೇರಿಕೊಂಡಿರಬೇಕು
ಗತವೈಭವದ ಚಹರೆಗಳ ಗೋಡೆ ಮೇಲಿನ
ಚಿತ್ರಪಟದಲ್ಲಿ ಹುಡುಕಬೇಕು.
ತಿಂಗಳ ಆ ದಿನಗಳಲ್ಲಿ ಹಾಟ್ ಬ್ಯಾಗಿಗೆ ನೀರು ತುಂಬಿಸಿ
ಹೊಟ್ಟೆಯ ಮೇಲಿಟ್ಟು ನೋವು ಕಡಿಮೆಯಾಯಿತೇ
ಎಂದು ಅವನ ಕಣ್ಣಲ್ಲಿ ಮೂಡುವ ಆತಂಕ ಕವಿತೆ

ಅರ್ಧರಾತ್ರಿ ದೆವ್ವದ ಕನಸು ಬಿದ್ದು
ಭಯದಿಂದ ಕಿರುಚಾಡಿ ಕನವರಿಸುವಾಗ
ತೋಳಿಗೆಳೆದುಕೊಂಡು ತಟ್ಟಿ ಮಲಗಿಸುವ ಅವನು ಕವಿತೆ

ದೀರ್ಘ ನಿದ್ದೆಯಲ್ಲೂ ತುಟಿಯ ಮೇಲೆ
ಅರ್ಧ ಚಂದಿರ ಮೂಡಿಸುವ
ಅವನ ಬಿಸಿಯುಸಿರ ಕಚಗುಳಿ  ಕವಿತೆ

ನಿದ್ದೆ ಹೋಗಿರುವ ಇವನೂ
ಕವಿತೆಯಾಗಲೆಂದು ಕಾಯುತ್ತಿರುವೆ

ನಿನ್ನೊಡನೆ ಪಿಸುಮಾತುಗಳೊಂದಿಷ್ಟು ಆಡುವುದಿದೆ
ಬದುಕೆಲ್ಲ ಹೊತ್ತು ಬಾ

ಇವ ಸಿಕ್ಕಾಪಟ್ಟೆ ನಗಿಸುವಾಗೆಲ್ಲ
ಕಣ್ಣಲ್ಲಿ ಬರುವ ಸಿಹಿನೀರು ಕವಿತೆ
ಇಡೀ ಜಗವ ಮರೆಸುವ ತಾಕತ್ತು ಇರುವ
ಅವನ  ನೆನಪು ಕವಿತೆ

ನೀನು ನೆನಪಾಗುತ್ತೀಯ
ಯಾವಾಗಲೂ
ನಾ ಉಸಿರಾಡುವಾಗೊಮ್ಮೆ ಮಾತ್ರ

Thursday, 4 January 2024



ನಾ ಯಾವಾಗಲೂ ಹೇಳುತ್ತೀನಿ ಅಲ್ಲವಾ
ಮಗುವಂತೆ ಪ್ರೀತಿಸಬೇಕು ನೀ ನನ್ನ
ಆದರೂ ಒರಟೊರಟಾಗಿ ಮುದ್ದಿಸಿಬಿಡು ಒಮ್ಮೆ

ಎಲ್ಲೋ ಜಂಜಾಟದಲ್ಲಿ ಕಳೆದು ಹೋಗಿರುವಾಗ
ಬರಸೆಳೆದು ಅಪ್ಪಿಬಿಡು, ಸುಳಿಗಾಳಿಗೂ ಬೇಡ ಒಂಚೂರು ಜಾಗ
ಉಸಿರುಕಟ್ಟಿ ಹೋಗಲಿ...
ತೀರ ಕಣ್ಣೊಳಗೆ ಇಳಿದುಬಿಡು, ರೆಪ್ಪೆಯ ಮೇಲೆ
ನಿನ್ನ ತುಟಿಗಳ ನರ್ತನ, ಅಮಲೇರಿ ಬಿಡಲಿ
ನೂರು ಸೂರ್ಯರ ಶಕ್ತಿ ಆ ನಿನ್ನ ಬೆರಳುಗಳಲ್ಲಿ,
ಹೊಸೆದುಬಿಡು ಅಂಗೈಯಲ್ಲಿ,  ಬೆಳಕಿನ ಸೀರೆ ಮೈಯೇರಲಿ..

ಹೆರಳ ಸರಿಸಿ, ಕೊರಳ ಅಪ್ಪಲಿ ನಿನ್ನ ಎಂಜಲು
ಬಿಸಿಯುಸಿರಿನ ಆವೇಗ ಕಿವಿಯ ಸುಳಿಯಲ್ಲಿ
ಮೈಯೆಲ್ಲಾ ಝಾಳಪಿಸುವ ಕತ್ತಿಯ ಅಂಚು
ಮಸ್ತಕದಲ್ಲೋ ಬೆಳ್ಳಂಬೆಳುದಿಂಗಳು..

ಬೆನ್ನಿಗಂಟಲಿ ನಿನ್ನ ಗುರುತು, ನಾಭಿಯೊಳಗೊಂದು ಸೆಳಕು
ವಿದ್ಯುತ್ ಪ್ರವಾಹ ಬೆನ್ನುಹುರಿಯಲೆಲ್ಲ, ಕಾಲುಂಗುರಕೊ ಆಕಾಶದ ಕನಸು
ನನ್ನ ಕನ್ನಡಿ, ನಿನ್ನ ಮೀಸೆ, ಅಣಕಿಸಲಿ ನನ್ನ
ನಾಚಿಬಿಡಲಿ ಮೂಗುತಿ..

ಕೇಳು ಒರಟೊರಟಾಗಿ ಮುದ್ದಿಸಿಬಿಡು ಒಮ್ಮೆ ... 

ಆತ್ಮಕ್ಕಂಟಿದ ನೆರಳು

ನೀನಂದು ಮುತ್ತಿಟ್ಟು ಹೋಗಬಾರದಿತ್ತು! 

ಈಗ ನೋಡು ಮೈಯೆಲ್ಲ ನಿನ್ನದೇ ಘಮ, 

ಎದೆಯಲ್ಲ ನಿನ್ನದೇ ಅಮಲು 

ತಲೆತುಂಬ ಕೇದಿಗೆಯ ಹೂವ ಮುಡಿದಂತೆ


ವಿದಾಯದ ಭೇಟಿಗೆ ಬಂದವ

ಭೋಳೇ ಶಂಕರನಂತೆ   ದೂರ ಕುಳಿತು 

ಚೌಕಾಶಿ ಮಾಡಿ ಹೋಗಿದ್ದರೆ ಬೇಶಿರುತ್ತಿತ್ತು

ಹೀಗೆ ತಬ್ಬಿ ಹಿಡಿದು, ಅತ್ತೂ ಕರೆದು ಗೋಳಾಡಿ

ನೋವಿನ ಗೆರೆಗಳ

ಖಾಯಂ ಆಗಿ ಉಳಿಸಿ ಹೋಗುವುದು ಸರಿಯಲ್ಲ ತಗಿ


ಹಾದಿಯಲ್ಲಿ ಸಿಕ್ಕು ಕೇಳುವವರಿಗೆಲ್ಲ

ಉತ್ತರ ಹೇಳುವುದೊಂದು ಗೋಜಲು

ಏನೋ ಬೇರೆ ತರಹ ಕಾಣುತ್ತಿರುವೆ? 

ಅವರಿಗೇನು ಗೊತ್ತು ನೀ ಕೊಟ್ಟು ಕಸಿದು

ಉಳಿಸಿ ಹೋದ  ವಸ್ತು- ಗಿಸ್ತು ಹೊತ್ತು ತಿರುಗುತ್ತಿರುವ 

ನಾನೀಗ  ನಿನ್ನ ಆತ್ಮಕ್ಕಂಟಿದ ನೆರಳು! 


ನನ್ನ ಪಾದಗಳು ನೋಡಿ ಅಣಕಿಸುತ್ತಲೇ ಇವೆ,

ಅದೆಷ್ಟು ಹಚ್ವಿಕೊಂಡಿದ್ದೆ ನೀ ಈ ಪಾದದ ಉಗುರುಗಳ,

ವಾರಕ್ಕೊಮ್ಮೆ ಬದಲಿಸುತ್ತಿದ್ದ  ರಂಗು ರಂಗಿನ ನೇಲ್ ಪಾಲೀಶನ್ನ!  

ಈಗ ಹೆಜ್ಜೆಗಳೆಲ್ಲ ಭಾರ! 

 ಹೋಗುವ ಮುನ್ನ ಪಾದಗಳ ಮುಟ್ಟಿ 

ಮೆತ್ತಗೆ ಒತ್ತಿ, ದೈನೇಸಿಯಂತೆ ಕಣ್ಣಲ್ಲಿ ಆರ್ದತೆ ತುಂಬಿಕೊಳ್ಳುವ 

ಹರಕತ್ತೇನೂ‌ ಇರಲಿಲ್ಲ

ಈಗ ನೋಡು ನಿನ್ನೂರಿನ ಹಾದಿಗೇ ಎಳೆಯುವ ಈ ಪಾದಗಳ 

ಸಂಭಾಳಿಸುವುದು ಬಲು ತ್ರಾಸಿನ‌ ಕೆಲಸ


ಮುಂದಿನ ಜನ್ಮ, ಅಲ್ಲಿ ನಿನ್ನೊಡನೆಯೇ ಇರುತ್ತೇನೆ

ಅನ್ನುವ ನಿನ್ನ ಕಟ್ಟು ಕತೆ ಪುರಾಣ ಪುರಾವೆಗಳನ್ನೆಲ್ಲ ಬಿಡು

ಈ ಜನ್ಮ ಕಳೆದರೂ ಅಳಿಯದ, ಉಳಿಸಿ ದಾಟಿಸಲಾಗದೇ ಹೋದ ಅದೆಷ್ಟೋ‌ ನೆನಪು, ನೇವರಿಕೆ, ಬೆವರ ಘಮಲು , 

ಮೈಯ ಬಿಸುಪು, ಕಾಪಿಡಲು ಕೊಟ್ಟ ಮಾತುಗಳು..

ಇಷ್ಟು ಸಾಕಲ್ಲವೇ!!