Sunday, 30 March 2014

           ಯುಗಾದಿ 



ಬಂತು ಮತ್ತೊಂದು ಯುಗದ ಆದಿ 
ಬೇವೇನು, ಬೆಲ್ಲವೇನು 
ನಾನಂತೂ ಹಾಡಲು ಸಿದ್ಧವಾಗಿದ್ದೇನೆ 
ಹರುಷ ಗೀತೆಗೆ ನಾಂದಿ.. 

ನನ್ನವರು ನನ್ನವರಲ್ಲದವರು ಎಲ್ಲರಿಗೂ, 
ದೇವರೇ ಎರೆದುಬಿಡು ಬೆಲ್ಲದ ಸವಿರುಚಿ, 
ಹಿತಮಿತವಾಗಿರಲಿ ಕಹಿ.. 

ಬೆಲ್ಲದ ಸವಿ ಉಣ್ಣುತ್ತಲೇ ಬಂದವರಿಗೆ 
ಈ ವರುಷವೂ ಇರಲಿ ಬರಿಯ ಸಿಹಿ 
ಬಂದರೆ ಬರಲಿ ಸಕ್ಕರೆ ಖಾಯಿಲೆಯ ನೋವು...   
ಹಾ! ಮತ್ತೆ ಚುನಾವಣೆ ಬಂತಲ್ಲವೇ 
ಭ್ರಷ್ಟರಿಗೆಲ್ಲ ತೋರಿಸಿಯೇ ಬಿಡು
ಸೋಲಿನ ಕಹಿ ಬೇವು ... 

ಭಗವಂತ ಇಗೋ ಕೇಳು ನನ್ನ ಅಹವಾಲು 
ನಿನ್ನ ಪಾಕಶಾಲೆಯಿಂದ ನನಗಾಗಿ ತಯಾರಾಗುತ್ತಿರುವ 
ರಸಾಯನಕ್ಕೆ ಬೆಲ್ಲದ ಕೈ ಸ್ವಲ್ಪ ಮುಂದೇ ಇರಲಿ 
ಕಹಿ ಉಂಡು ಸಾಕಾಗಿದೆ.. 
ಜೊತೆಗಿರಲಿ ಒಂದಿಷ್ಟು ಹುಣಸೆ ಹುಳಿಯ ಮಜ  
ಮತ್ತೆ ಒಂಚೂರು ಮಾವಿನ ಚಿಗುರಿನ ಒಗರು..!

ಯುಗ ಯುಗಾದಿ ಕಳೆದರು ಮತ್ತೆ ಬರುವ ಯುಗಾದಿಯಂತೆ 
ಸುಲಲಿತವಾಗಲಿ ಎಲ್ಲರ ಬಾಳು, ಆ ಕೋಗಿಲೆ ದನಿಯ ಇಂಪಿನಂತೆ.. :) :)










Friday, 21 March 2014

ಹೋಳಿ

ಗುಲಾಲು ಹಚ್ಚಲು ಬಂದ  ನಲ್ಲ...
ನಾನೆಂದೆ, ಬರೀ ಕಪ್ಪು, ಮತ್ತೊಂದಿಷ್ಟು ಬಿಳಿ
ಬದುಕೆಲ್ಲ..

ಈಗ ನಾ ಬಂದೆನಲ್ಲ
ಪ್ರೀತಿಯ ಕೆಂಪು, ವಿರಹದ ನೀಲಿ,
ಸ್ನೇಹದ ಹಳದಿ, ಮುನಿಸಿನ ಗುಲಾಬಿ..
ತುಂಬಿಕೊ ಉಡಿಯೆಲ್ಲ, ಇನ್ನು ಮೇಲೆ ಬಣ್ಣವೇ  ಇಲ್ಲೆಲ್ಲ... 

ಯುದ್ಧ 

ಮೂರನೇ ಮಹಾಯುದ್ಧ
ಅವನ ಅವಳ ಮಧ್ಯ.. !!
ಕಾರಣ :
ಅವ ತೆಗೆಸಿದ್ದಾನೆ
ಇವಳಿಗೆಂದೇ ಬೆಳೆಸಿದ್ದ
ಕೋರೆ ಮೀಸೆ, ಕುರುಚಲು ಗಡ್ಡ.. (ಕ್ಲೀನ್ ಶೇವ್) !
ಸೇಡು :
ಕಿತ್ತು ಬಿಸಾಕಿದ್ದಾಳೆ
ಅವನ ನೆಚ್ಚಿನ ಮೂಗುತಿ..!!

ಅಷ್ಟೇ.. 

ನಿನ್ನ ವೀರ್ಯವ ಬಸಿರಲ್ಲಿ ಹೊತ್ತು
ಹನ್ನೆರಡು ಮಕ್ಕಳ ಹಡೆಯುವ ಬಯಕೆಯಿಲ್ಲ,
ನನ್ನ  ಹೆಸರ ಮುಂದೆ ನಿನ್ನ ಅಡ್ಡಹೆಸರ
ತಳುಕು ಹಾಕಿಕೊಳ್ಳುವ ಖಯಾಲಿಯೂ ಇಲ್ಲ,
 ಜೊತೆಗೇ ಬರುವ ನಿನ್ನ ಹೆಸರ ಹೊತ್ತ
ಕರಿಮಣಿ ಸರದ ಸಹವಾಸವಂತೂ ಬೇಡವೇ ಬೇಡ..
ನನಗೆ ಬೇಕಿರುವುದು
ನಾಲ್ಕು ಮಾತು, ಒಂದು ಜಗಳ, ಮತ್ತೆರೆಡು ನಗೆ..
ಅಷ್ಟೇ...  

4.
ನಿನ್ನೆ ರಾತ್ರಿಯೆಲ್ಲ ನಿನ್ನದೇ ನೆನಪು
ಉರಿಯುವ ದೀಪದ ಜೊತೆ,
ಸುಡುಗಾಡು, ಈ ಆತ್ಮವೂ ಉರಿಯುತ್ತಿತ್ತು
ಜೀವರಸವೂ ಸೋರಿರಬಹುದು ಸ್ವಲ್ಪ
ಕಣ್ಣೀರು ಹರಿದಿತ್ತೇನೋ, ಕೆನ್ನೆಯೆಲ್ಲ ಉಪ್ಪುಪ್ಪು..!

ನಿನ್ನಗಲಿಕೆಯ ನೋವಿನ ತೀವ್ರತೆಗೆ
ನನ್ನ ವೀಣೆಯ ಶ್ರುತಿ ಮಿಡಿಯುವ
ಚಂದ್ರಕೌಂಸದ ಜುಗಲ್ ಬಂದಿ.. 
ನೆನಪ ಕೊಲ್ಲುವ ನೆಪದಲ್ಲಿ, ತಾನ್ ಗಳೆಲ್ಲ ಕರಗತ
ಸಾ ಗ ಮ ಧ ನಿ ಸಾ, ಸಾ ನಿ ಧ ಮ ಗ, ಮ ಗ ಸಾ ನಿ ಸಾ..!!
ಪೂರ್ವದಲ್ಲಿ ಸೂರ್ಯನ ಉದಯ, ಕಿಸಕ್ಕನೆ ನಗುತ್ತಾನೆ..  
ಸುಡುಗಾಡು, ಈ ಆತ್ಮ ಉರಿಯುತ್ತದೆ.. 

Wednesday, 19 March 2014

ಈ ಶತಮಾನದ ಮಾದರಿ ಹೆಣ್ಣು   

   

ಎದೆಯೊಳಗಿನ ಕತ್ತಲನ್ನೆಲ್ಲ, ಕುಂಚಕ್ಕೆ ಸವರಿ 
ಕಣ್ಣ ಕಾಡಿಗೆ ಮಾಡಿಕೊಂಡೆ, ನೋಟವೆಲ್ಲ ಈಗ ತೀಕ್ಷ್ಣ ..!
ಗುಂಡಿಗೆಯ ಹೆಪ್ಪುಗಟ್ಟಿದ ರಕ್ತವ 
ಬಾಚಿ ಮೆತ್ತಿಕೊಂಡೆ, ತುಟಿಗೆ ಹೊಳೆವ  ಕೆಂಪು ರಂಗು..!

ಅಂತರಂಗದ ವೈರುಧ್ಯಗಳನ್ನೆಲ್ಲ ನುಣ್ಣಗೆ ಪುಡಿಮಾಡಿ 
ಬಳಿದುಕೊಂಡೆ, ಬಿಳಿಚಿದ್ದ ಕೆನ್ನೆಯೆಲ್ಲ ಫಳ ಫಳ..! 
ತಲೆಯೇರಿ ಸವಾರಿ ಮಾಡುವ ಕುಹಕಗಳ, ಹಿಡಿದು ಕಟ್ಟಿ
 ಮಟ್ಟಸವಾಗಿ ಹೆಣೆದೆ, ಆಹಾ ನವೀನ ಕೇಶವಿನ್ಯಾಸ..! 

ಯಾವಾಗೆಂದರೆ ಆವಾಗ ಬಂದಪ್ಪಳಿಸುವ, ಅಕರಾಳ ವಿಕರಾಳ
 ಚೀತ್ಕಾರಗಳಿಗೆ ತೋರುತ್ತೇನೆ ಜಾಣಕಿವುಡು, 
ಸೋಲೊಪ್ಪಿಕೊಂಡ ಅವನ್ನು ಕಿವಿಗೆ ಇಳಿಬಿಟ್ಟೆ, ಆಕರ್ಷಕ ಕಿವಿಯೋಲೆ..! 

ಹೆಜ್ಜೆ ಹೆಜ್ಜೆಗೂ ಕಾಲಿಗೆ ತೊಡರುವ ಕತ್ತಿಯಂಚಿನ ಮೇಲೆ ನಡೆದ ದಾರಿ  
ಇನಿತೂ ತೊಂದರೆಯಿಲ್ಲ, ಒಪ್ಪವಾಗಿ ಸುತ್ತಿ ಮಾಡಿಕೊಂಡೆ ಕಾಲ್ಗೆಜ್ಜೆ,
ಮುಂಬರುವ ಕವಲುದಾರಿ, ತಿರುವುಗಳಿಗೆಲ್ಲ ಘಲ್ ಘಲ್ ಸದ್ದೇ ಎಚ್ಚರದ ಕರೆಗಂಟೆ..! 

ಶ್ವಾಸದಿಂದ ಉಕ್ಕಿಬರಲು ಹವಣಿಸುವ ದುಃಖದ ಮಡುವ ಹತ್ತಿಕ್ಕಿ, 
ಅಲ್ಲೇ ಘನೀಕರಿಸುತ್ತೇನೆ, ಎಂಥವರಲ್ಲೂ
 ಆಸೆ ಹುಟ್ಟಿಸುವ ಬಿಗಿಯಾದ ಎದೆಕಟ್ಟು..!

ಭೂತದ ಛಾಯೆ ಕವಿದಿರುವ ದೇಹಕ್ಕೆ, 
ಭವಿಷ್ಯದ ಕನಸಿನ ಗರಿಗರಿ ಪೋಷಾಕು, ವರ್ತಮಾನ ಚಲಿಸಬೇಕಲ್ಲ..??

ಹಾ ಇಗೋ ಬಂದೆ, ನಾನೀಗ ಸಿದ್ಧ, ನಿಮ್ಮ ಕ್ಯಾಮೆರಾದ ಕಣ್ಣಿಗೆ
 ಕ್ಲಿಕ್ಕಿಸಿ, ತೋರುತ್ತೇನೆ, ನಕಲಿ ನಗೆ.. 
ಹೃದಯ ಹಗುರಾಗಿ ತೇಲಿಬಂದ ಹೂ ನಗೆಯಲ್ಲ
 ತೀರ ಕಿಬ್ಬೊಟ್ಟೆಯಲ್ಲಿ ಅಳದೇ ಮುಚ್ಚಿಟ್ಟ ನಗೆ..!

ಅರೇ, ನೋಡಿ ಅಲ್ಲಿ ಅವಳ ಛಾಯಾಚಿತ್ರ,
ವಾಹ್, ಎಷ್ಟು ಆಕರ್ಷಕ, ಏನು ಮೋಡಿ.. 
ಪುಣ್ಯವಂತೆ ಇವಳು, ಎಷ್ಟು ತೀವ್ರವಾಗಿ ಬದುಕುತ್ತಾಳೆ..!! 
ಸುಂದರ ಇವಳ ಜೀವನ, ಇವಳಂತೆಯೇ.. 
ಪಾಪಿ, ನಮಗೆಲ್ಲ ಹೊಟ್ಟೆ ಉರಿಸುತ್ತಾಳೆ.. 

ಅಬ್ಬಾ, ಎಷ್ಟು ಕರಗತ ನನಗೀ ನಗುವ ಕಲೆ,  ನಟಸಾರ್ವಭೌಮೆ..!
ಹೌದು, ಕಟ್ಟಿ ಎಲ್ಲೋ  ಎಸೆದು, ಮರೆತ ಬಯಕೆಗಳ ಗಂಟಿನಾಣೆ,  
ಇದು ನಾನು
 ಈ ಶತಮಾನದ ಮಾದರಿ ಹೆಣ್ಣು..!!

Monday, 3 March 2014

            ಕಣ್ಣಿನಾಟ 


ನಾನೀಗ ಏನೋ ಹೇಳಬೇಕಿದೆ ತುಂಬ ದೀರ್ಘವಾದ ವಿಚಾರ  
ಇತ್ತ ನೋಡು ನನ್ನನ್ನೇ, 
ಗಮನವಿಟ್ಟು ಕೇಳು...  

ಇಷ್ಟೆಲ್ಲಾ ಇದೆ ಜಂಜಡ, ಬೇಗ ನಿರುಮ್ಮಳಾಗುವ ಅವಸರ..   
 ಅರ್ಥವಾಯಿತೇ..? 
ಪರಿಹಾರವೇನು,  ಹೇಳೇ ಬಿಡು.. 

ಅರೇ..??   ಅದೇನು ಹೇಳಿದೆ ನೀ..?? 
ಕಣ್ಣ ಕಾಡಿಗೆ ಮಂಕುಬೂದಿ ಎರಚಿತು ನೋಡು  
ತಲೆಯೆಲ್ಲ ಸುತ್ತು, ಬುದ್ಧಿ ವಶೀಕರಣ 
ಆಡುವ ಪ್ರತೀ ಅಕ್ಷರಕ್ಕೂ, ಕಣ್ಸನ್ನೆಯ ವ್ಯಾಕರಣ... 
 ಒಮ್ಮೆ ಕಿರಿದು, ಆಶ್ಚರ್ಯಕ್ಕೆ ಊರಗಲ ಮರುಕ್ಷಣ..!!   
ಕಳವಳ, ತಳಮಳಗಳೆಲ್ಲವೂ, ರೆಪ್ಪೆಗಳ ಪಟಪಟದೊಂದಿಗೆ ಅನಾವರಣ..
 ಅದ್ಭುತ ಯಕ್ಷಗಾನ...!!  
ಕಳೆದೇ ಹೋಗಿದ್ದೆ ನಿನ್ನ ಕಣ್ಣಿನಾಟದಲ್ಲಿ, ಕಿವಿಗೇನೂ ಬೀಳಲಿಲ್ಲ..   
ಮತ್ತೊಮ್ಮೆ ಹೇಳು ಆ ನಿನ್ನ ದೀರ್ಘ ವಿಚಾರ  
ಈಗ ಕೇಳಿಸಿಕೊಳ್ಳುವೆ ಸರಿಯಾಗಿ
 ಬೇರೆತ್ತಲೋ ನೋಡುತ್ತ...!!