Thursday, 4 January 2024



ನಾ ಯಾವಾಗಲೂ ಹೇಳುತ್ತೀನಿ ಅಲ್ಲವಾ
ಮಗುವಂತೆ ಪ್ರೀತಿಸಬೇಕು ನೀ ನನ್ನ
ಆದರೂ ಒರಟೊರಟಾಗಿ ಮುದ್ದಿಸಿಬಿಡು ಒಮ್ಮೆ

ಎಲ್ಲೋ ಜಂಜಾಟದಲ್ಲಿ ಕಳೆದು ಹೋಗಿರುವಾಗ
ಬರಸೆಳೆದು ಅಪ್ಪಿಬಿಡು, ಸುಳಿಗಾಳಿಗೂ ಬೇಡ ಒಂಚೂರು ಜಾಗ
ಉಸಿರುಕಟ್ಟಿ ಹೋಗಲಿ...
ತೀರ ಕಣ್ಣೊಳಗೆ ಇಳಿದುಬಿಡು, ರೆಪ್ಪೆಯ ಮೇಲೆ
ನಿನ್ನ ತುಟಿಗಳ ನರ್ತನ, ಅಮಲೇರಿ ಬಿಡಲಿ
ನೂರು ಸೂರ್ಯರ ಶಕ್ತಿ ಆ ನಿನ್ನ ಬೆರಳುಗಳಲ್ಲಿ,
ಹೊಸೆದುಬಿಡು ಅಂಗೈಯಲ್ಲಿ,  ಬೆಳಕಿನ ಸೀರೆ ಮೈಯೇರಲಿ..

ಹೆರಳ ಸರಿಸಿ, ಕೊರಳ ಅಪ್ಪಲಿ ನಿನ್ನ ಎಂಜಲು
ಬಿಸಿಯುಸಿರಿನ ಆವೇಗ ಕಿವಿಯ ಸುಳಿಯಲ್ಲಿ
ಮೈಯೆಲ್ಲಾ ಝಾಳಪಿಸುವ ಕತ್ತಿಯ ಅಂಚು
ಮಸ್ತಕದಲ್ಲೋ ಬೆಳ್ಳಂಬೆಳುದಿಂಗಳು..

ಬೆನ್ನಿಗಂಟಲಿ ನಿನ್ನ ಗುರುತು, ನಾಭಿಯೊಳಗೊಂದು ಸೆಳಕು
ವಿದ್ಯುತ್ ಪ್ರವಾಹ ಬೆನ್ನುಹುರಿಯಲೆಲ್ಲ, ಕಾಲುಂಗುರಕೊ ಆಕಾಶದ ಕನಸು
ನನ್ನ ಕನ್ನಡಿ, ನಿನ್ನ ಮೀಸೆ, ಅಣಕಿಸಲಿ ನನ್ನ
ನಾಚಿಬಿಡಲಿ ಮೂಗುತಿ..

ಕೇಳು ಒರಟೊರಟಾಗಿ ಮುದ್ದಿಸಿಬಿಡು ಒಮ್ಮೆ ... 

ಆತ್ಮಕ್ಕಂಟಿದ ನೆರಳು

ನೀನಂದು ಮುತ್ತಿಟ್ಟು ಹೋಗಬಾರದಿತ್ತು! 

ಈಗ ನೋಡು ಮೈಯೆಲ್ಲ ನಿನ್ನದೇ ಘಮ, 

ಎದೆಯಲ್ಲ ನಿನ್ನದೇ ಅಮಲು 

ತಲೆತುಂಬ ಕೇದಿಗೆಯ ಹೂವ ಮುಡಿದಂತೆ


ವಿದಾಯದ ಭೇಟಿಗೆ ಬಂದವ

ಭೋಳೇ ಶಂಕರನಂತೆ   ದೂರ ಕುಳಿತು 

ಚೌಕಾಶಿ ಮಾಡಿ ಹೋಗಿದ್ದರೆ ಬೇಶಿರುತ್ತಿತ್ತು

ಹೀಗೆ ತಬ್ಬಿ ಹಿಡಿದು, ಅತ್ತೂ ಕರೆದು ಗೋಳಾಡಿ

ನೋವಿನ ಗೆರೆಗಳ

ಖಾಯಂ ಆಗಿ ಉಳಿಸಿ ಹೋಗುವುದು ಸರಿಯಲ್ಲ ತಗಿ


ಹಾದಿಯಲ್ಲಿ ಸಿಕ್ಕು ಕೇಳುವವರಿಗೆಲ್ಲ

ಉತ್ತರ ಹೇಳುವುದೊಂದು ಗೋಜಲು

ಏನೋ ಬೇರೆ ತರಹ ಕಾಣುತ್ತಿರುವೆ? 

ಅವರಿಗೇನು ಗೊತ್ತು ನೀ ಕೊಟ್ಟು ಕಸಿದು

ಉಳಿಸಿ ಹೋದ  ವಸ್ತು- ಗಿಸ್ತು ಹೊತ್ತು ತಿರುಗುತ್ತಿರುವ 

ನಾನೀಗ  ನಿನ್ನ ಆತ್ಮಕ್ಕಂಟಿದ ನೆರಳು! 


ನನ್ನ ಪಾದಗಳು ನೋಡಿ ಅಣಕಿಸುತ್ತಲೇ ಇವೆ,

ಅದೆಷ್ಟು ಹಚ್ವಿಕೊಂಡಿದ್ದೆ ನೀ ಈ ಪಾದದ ಉಗುರುಗಳ,

ವಾರಕ್ಕೊಮ್ಮೆ ಬದಲಿಸುತ್ತಿದ್ದ  ರಂಗು ರಂಗಿನ ನೇಲ್ ಪಾಲೀಶನ್ನ!  

ಈಗ ಹೆಜ್ಜೆಗಳೆಲ್ಲ ಭಾರ! 

 ಹೋಗುವ ಮುನ್ನ ಪಾದಗಳ ಮುಟ್ಟಿ 

ಮೆತ್ತಗೆ ಒತ್ತಿ, ದೈನೇಸಿಯಂತೆ ಕಣ್ಣಲ್ಲಿ ಆರ್ದತೆ ತುಂಬಿಕೊಳ್ಳುವ 

ಹರಕತ್ತೇನೂ‌ ಇರಲಿಲ್ಲ

ಈಗ ನೋಡು ನಿನ್ನೂರಿನ ಹಾದಿಗೇ ಎಳೆಯುವ ಈ ಪಾದಗಳ 

ಸಂಭಾಳಿಸುವುದು ಬಲು ತ್ರಾಸಿನ‌ ಕೆಲಸ


ಮುಂದಿನ ಜನ್ಮ, ಅಲ್ಲಿ ನಿನ್ನೊಡನೆಯೇ ಇರುತ್ತೇನೆ

ಅನ್ನುವ ನಿನ್ನ ಕಟ್ಟು ಕತೆ ಪುರಾಣ ಪುರಾವೆಗಳನ್ನೆಲ್ಲ ಬಿಡು

ಈ ಜನ್ಮ ಕಳೆದರೂ ಅಳಿಯದ, ಉಳಿಸಿ ದಾಟಿಸಲಾಗದೇ ಹೋದ ಅದೆಷ್ಟೋ‌ ನೆನಪು, ನೇವರಿಕೆ, ಬೆವರ ಘಮಲು , 

ಮೈಯ ಬಿಸುಪು, ಕಾಪಿಡಲು ಕೊಟ್ಟ ಮಾತುಗಳು..

ಇಷ್ಟು ಸಾಕಲ್ಲವೇ!!