Friday, 13 October 2017

ಅವ್ವ ಕೊಟ್ಟ ಸೇವಂತಿ ಸಸಿ 



















ಎರಡು ದೀಪಾವಳಿಯ ಹಿಂದೆಯೇ  ಅಲ್ಲವೇ
ನಿಮ್ಮವ್ವ ಈ ಸೇವಂತಿ ಸಸಿ ಕೊಟ್ಟಿದ್ದು? ಗೊಡ್ಡು ಇರಬೇಕು
ವರುಷ ಎರಡಾಯಿತು, ಒಂದು ಮೊಗ್ಗಿಲ್ಲಾ, ಹೂವಿಲ್ಲಾ
ಹೀಗೆಲ್ಲ ಅವರು ಮೂದಲಿಸುವಾಗ, ಪಾಪ
ಸೇವಂತಿ ನನ್ನೇ  ನೋಡುತ್ತಿತ್ತು
ಥೇಟ್ ನನ್ನವ್ವನಂತೆ!

ದಿನಕ್ಕೆ ಮೂರು ಬಾರಿ ನೀರು, ಮನೆಯಲ್ಲೇ ಶ್ರದ್ಧೆಯಿಂದ ತಯಾರಿಸಿದ
ಕಾಂಪೋಸ್ಟ್ ಗೊಬ್ಬರ, ವಾರಕ್ಕೊಮ್ಮೆ ಮಣ್ಣು ಹದಗೊಳಿಸುವುದು,
ಊಹುಂ, ಒಂದು ಮೊಗ್ಗಿಲ್ಲಾ, ಹೂವಿಲ್ಲಾ..
ಕಿತ್ತೆಸೆದುಬಿಡು, ಜಾಗವಾದರೂ ಖಾಲಿ ಆಗಲಿ
ನೆಡೋಣ ಗುಲಾಬಿ, ಇಲ್ಲವೇ ಟೊಮೆಟೊ, ಮೆಣಸಿನಕಾಯಿ, ಅಡುಗೆಮನೆಯ
ಉಪಯೋಗಕ್ಕಾದರೂ ಆಯಿತು ಎಂದರು ಅತ್ತೆ
ಆತಂಕಗೊಂಡ ನನ್ನ ಕರುಣೆಯಿಂದ ನೋಡಿ ಸೇವಂತಿ ಉಸುರುತ್ತದೆ 
'ತಾಳ್ಮೆ ಇರಲಿ ಮಗಳೇ' ಎಂದು, ಥೇಟ್ ನನ್ನವ್ವನಂತೆ!

ಮುಂಜಾನೆಯ ತರಾತುರಿಯಲ್ಲಿ, ಪಲ್ಯದ ಒಗ್ಗರಣೆಯ ನಡುವೆ
ಆಫೀಸಿಗೆ ಓಡುವ ಧಾವಂತದಲ್ಲೂ ಒಂದು ಚಣ ಸೇವಂತಿಯ ಮುಂದೆ ಕುಳಿತು
ಎಳೆಗಳ ಮುಟ್ಟಿ ಸವರಿ, ನೀನೆಂದು ಮೊಗ್ಗಾಗುವೆಯೇ ಸೇವಂತಿ ಎಂದು ನಿಡುಸುಯ್ಲಿಡುತ್ತೇನೆ,
ಇವಳಿಗೆಲ್ಲಿ ಹುಚ್ಚು ಹಿಡಿಯುತ್ತೋ ಎಂದು ಮನೆಯವರೆಲ್ಲ ಮೂಗು ಮುರಿಯುವಾಗ,
 ಹಿಡಿದ ಸೇವಂತಿ ಎಲೆ, ಕೈ ನೇವರಿಸಿ
ಸಾಂತ್ವನ ಹೇಳುತ್ತದೆ ಥೇಟ್ ನನ್ನವ್ವನಂತೆ!

ಎಂದಿನಂತೆ ಇಂದು ಮುಂಜಾನೆಯೂ ಎದ್ದು ಸೇವಂತಿಯ ಭೇಟಿಗೆ ಹೋದೆ
ಅರೆ!!! ಮೊಗ್ಗು!! ಒಂದು, ಎರಡು, ಮೂರು, ಹಾ ಅಲ್ಲೊಂದು, ಮತ್ತೆ ಇಲ್ಲೂ ಒಂದು
ಒಟ್ಟು ಹನ್ನೆರಡು, ಮನೆಯವರನ್ನೆಲ್ಲ ಕರೆದು ತೋರಿಸಿ, ಕೈ ತಟ್ಟಿ ಕುಣಿದೆ
ಸೇವಂತಿ ಎಲೆಮೇಲಿಂದ ಮಂಜುಹನಿ ಜಾರಿಸಿತು
ಆನಂದಭಾಷ್ಪವಾಗುವ ಥೇಟ್ ನನ್ನವ್ವನಂತೆ!

ಇನ್ನೀಗ ಪ್ರಸವ ವೇದನೆ, ಸೇವಂತಿಗೂ ಮತ್ತೆ  ನನಗೂ
ಮೊಗ್ಗು ಹೂವಾಗುವುದ ನೋಡುವ ವ್ಯಸನ
ಕಣ್ಣುನೆಟ್ಟು ಕಾಯುವುದೇ ಒಂದು ಗೀಳು..
ನೋಡ ನೋಡುತ್ತ ಇಷ್ಟಗಲ, ಅಷ್ಟಗಲ ನಿಧಾನವಾಗಿ
ಪಕಳೆ ಬಿಚ್ಚಿ, ಬಂಗಾರ ಹಳದಿ ಬಣ್ಣದ ಸೇವಂತಿ
ಕಂಪು ಸೂಸುತ್ತ ಅರಳೇ ಬಿಟ್ಟವು
ಥೇಟ್ ನನ್ನವ್ವನ ಆತ್ಮದಂತೆ!!