Saturday, 16 November 2013

ಹಸಿವು


   ಹಸಿವು 


ಎಂಥ ಕಸುವೋ ಅಣ್ಣಾ 
ಈ ಹಸಿವಿಗೆ……
ಮನುಕುಲವ ಹಾಳುಗೆಡಿಸುತ್ತಿರುವ 
ಕಲಿಯುಗದ ಈ ಹಸಿವಿಗೆ
ಎಂಥ ಕಸುವೋ ಅಣ್ಣಾ ….


ಹಿಂದೊಮ್ಮೆ ಬುಧ್ದನೊಬ್ಬ ಅರ್ದರಾತ್ರಿ ಎದ್ದು ನಡೆದಿದ್ದ
ಮುಕ್ತಿಯ ಹಸಿವೆಗೆ…
ಮತ್ತೊಬ್ಬ ಕಂದ, ಬಸವ ಪರಿವಾರ ಬಿಟ್ಟು ನಡೆದಿದ್ದ
ಲೋಕಕಲ್ಯಾಣದ ಹಸಿವೆಗೆ..
ಅಂದೊಬ್ಬ ವಿವೇಕಾನಂದ ಧೀಮಂತನಾಗಿ ಎದ್ದು ನಿಂತಿದ್ದ
ಜ್ನಾನದ ಹಸಿವೆಗೆ…
ಅಕ್ಕ ಒಬ್ಬಳು ಸರ್ವಸಂಗ ಪರಿತ್ಯಾಗಿಯಾದಳು
ಭಕ್ತಿ ಪರಾಕಾಷ್ಟೆಯ ಹಸಿವೆಗೆ…
ಅಲ್ಲೊಬ್ಬ ಸಂಗೊಳ್ಲಿ ರಾಯ ಜೀವ ತೆತ್ತಿದ್ದ
ದೇಶಪ್ರೇಮದ ಹಸಿವೆಗೆ…


ಆದರೆ ಈ ಕಲಿಯುಗದ ಹಸಿವೆ ಎಂಥದೊ ಅಣ್ನಾ..
ಪ್ರಳಯದ ಕೊಸರಿನಂತೆ ಈ ಹಸಿವು..
ಹೆಬ್ಬಾವಿನ ಬುಸುಗುಡುವಿಕೆಯಂತೆ ಈ ಹಸಿವು..
ಭೂ ಗರ್ಭದ ಲಾವಾರಸದಂತೆ ಈ ಹಸಿವು..!!!
ಇಲ್ಲೊಬ್ಬನಿಗೆ ತೀರದ ಅಧಿಕಾರದ ಹಸಿವು..
ಹಗರಣಗಳ ಕೊಚ್ಚೆಯಲ್ಲಿ ಬಿದ್ದು ನರಳುತ್ತಿದ್ದರೂ
ದೇಶವನ್ನಾಳುವ ಹಸಿವು..
ಜಾತೀಯತೆಯ ವಿಷಬೀಜ ಬಿತ್ತಿ ರಾಜಕಾರಣ ಮಾಡುವ ಹಸಿವು..
ಮತ್ತೊಬ್ಬನಿಗೆ ಭೂತಾಯಿಯ ಎದೆಬಗೆದು
ಮಣ್ನು ಮಾರಿದರೂ ತೀರದ ಹಣದ ಹಸಿವು..
ಇನ್ನೊಬ್ಬನಿಗೆ, ಕಾವಿ ತೊಟ್ಟು ಪ್ರವಚನ ಪಠಿಸಿದರೂ
ಹಾಗೇ ಉಳಿದಿರುವ ದೇಹದ ಹಸಿವು…!!!!


ಎಂಥ ಕಸುವೋ ಅಣ್ನಾ ಕಲಿಯುಗದ ಈ ಹಸಿವಿಗೆ..??
ಕಾದುನೋಡೋಣ, ಏನಾದರೂ ಮಾಡೋಣ,
ಕುಸಿಯುತ್ತಿರುವ ಮ್ಉಲ್ಯಗಳ ಮತ್ತೆ ಎತ್ತಿಹಿಡಿದು
ದಿವ್ಯಪಥದತ್ತ ನಡೆಸುವ಻ ಹಸಿವಿಗೆ….