ಹೂ ಮುತ್ತು
ಹಣೆಯ ಮೇಲಿಟ್ಟ ಹೂ ಮುತ್ತು
ಹೇಗಿತ್ತು ಹೇಗಿತ್ತು ಹೇಗಿತ್ತು
ಎಂದು ಪದೇ ಪದೇ ಕೇಳಿದರೆ ನಾನೇನು ಹೇಳಲಿ….
ಈ ಭೂಮಿಯ ಮೇಲಿನ ನಿನ್ನ ಇರುವಿಕೆಯನ್ನು
ಕೇವಲ ನನಗಾಗಿ ಹೊತ್ತು ಬಂದಂತಿತ್ತು…..
ಆತ್ಮಕ್ಕೆ ತಟ್ಟಿ ನನ್ನ ಅಸ್ತಿತ್ವವನ್ನು ಎಚ್ಚರಿಸಿದಂತಿತ್ತು….
ಜಡಗಟ್ಟಿದ್ದ ನರಗಳ ಕೊಂಡಿ ಕಳಚಿಟ್ಟು ಜ್ಯೋತಿ ಬೆಳಗಿದಂತಿತ್ತು……
ನೊಸಲ ತುಂಬ ಹರಡಿದ್ದ ನೆರಿಗೆಗಳನ್ನ
ಅದ್ಯಾವುದೋ ಮಾಂತ್ರಿಕ ಶಕ್ತಿ ಮಾಯ ಮಾಡಿದಂತ್ತಿತ್ತು…..
ನನ್ನ ದೇಹದ ಕಣ ಕಣದ ಶಕ್ತಿಯನ್ನ ಕೂಡಿಕೊಟ್ಟಂತ್ತಿತ್ತು…..
ಉಸಿರಲ್ಲಿ ಉಸಿರಾಗಿ, ಹೆಸರು ಮರೆವ ಆ ಕೊನೆ ಘಳಿಗೆವರೆಗೆ
ಜೊತೆಯಾಗಿರುವೆ ಎಂದು ನೀ ಕಿವಿಯಲ್ಲಿ ಉಸಿರಿದಂತ್ತಿತ್ತು…..
ನನ್ನೀ ಕಂಗಳಲ್ಲಿ ಇನ್ನು ಮೇಲೆ ಬರೀ ದಿವ್ಯ ಬೆಳಕು ಎಂಬ
ಭರವಸೆಯ ಮಹಾನದಿಯೇ ಹರಿದು ಬಂದಂತ್ತಿತ್ತು…..
ಸಾಕು, ಇನ್ನೆಂದಿಗೂ ಕೇಳಬೇಡ….
ಹಣೆಯ ಮೇಲಿಟ್ಟ ಹೂ ಮುತ್ತು
ಹೇಗಿತ್ತು ಹೇಗಿತ್ತು ಹೇಗಿತ್ತು….